ಕುಂದಾಪುರ : ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಾಡುಹಂದಿಗಳು ಹಾಗೂ ಸೇನಾಪುರದಲ್ಲಿ ಸಾಕು ಹಂದಿಗಳು ಸರಣಿ ಸಾವನ್ನಪ್ಪಿರುವ ಪ್ರಕರಣಕ್ಕೆ ಆಫ್ರಿಕನ್ ಹಂದಿ ಜ್ವರ (ASF) ಕಾರಣ ಎಂಬುದು ದೃಢಪಟ್ಟಿದೆ.
ಕುಂದಬಾರಂದಾಡಿಯಲ್ಲಿ ಸಾವನ್ನಪ್ಪಿದ ಕಾಡುಹಂದಿ ಹಾಗೂ ಸೇನಾಪುರದ ಫಾರ್ಮ್ನಲ್ಲಿ ಮೃತಪಟ್ಟ ಸಾಕುಹಂದಿಯ ಮಾದರಿಗಳನ್ನು ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಸಂಗ್ರಹಿಸಿ ಬೆಂಗಳೂರಿನ ಭಾರತೀಯ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಮತ್ತಷ್ಟು ಖಚಿತಪಡಿಸಿಕೊಳ್ಳುವ ಸಲುವಾಗಿ ಮಾದರಿಗಳನ್ನು ದೇಶದ ಉನ್ನತ ಮಟ್ಟದ ಪ್ರಯೋಗಾಲಯವಾಗಿರುವ ಭೋಪಾಲದ ಪ್ರಯೋಗಾಲಯಕ್ಕೂ ಕಳುಹಿಸಲಾಗಿತ್ತು. ಇದೀಗ ಅಲ್ಲಿನ ಪರೀಕ್ಷಾ ವರದಿಯಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ.
ಸೇನಾಪುರದ 1 ಕಿ.ಮೀ. ವ್ಯಾಪ್ತಿಯನ್ನು ಸೋಂಕಿತ ವಲಯವೆಂದು ಗುರುತಿಸುವ ಸಾಧ್ಯತೆ ಇದ್ದು, ಸೋಂಕು ಹರಡುವುದನ್ನು ತಡೆಯಲು ಪಶುಪಾಲನಾ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಕಾಡುಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿರುವುದು ರಾಜ್ಯದಲ್ಲೇ ಇದೇ ಮೊದಲ ಪ್ರಕರಣ ಎಂದು ವರದಿಯಾಗಿದೆ.

