ಕಡಬ : ಸರ್ಕಾರಿ ಶಾಲೆಯೊಂದರ ಮೇಲ್ಚಾವಣಿ ಕುಸಿದು ನಾಲ್ವರು ಮಕ್ಕಳು ಗಾಯಗೊಂಡ ಘಟನೆ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ನಡೆದಿದೆ. ಶಾಲೆ ನಡೆಯುತ್ತಿದ್ದ ವೇಳೆಯಲ್ಲಿಯೇ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಈ ವೇಳೆ ಶಾಲೆಯ ಒಳಗೆ ಇದ್ದ ನಾಲ್ವರು ಮಕ್ಕಳಿಗೆ ಗಾಯಗಳಾಗಿದೆ. ಅದೃಷ್ಟವಶಾತ್ ಹಲವು ಮಕ್ಕಳು ತರಗತಿ ಇಲ್ಲದ ಕಾರಣ ಹೊರಗೆ ಮೈದಾನದಲ್ಲಿ ಆಟವಾಡುವಾಗ ಈ ಘಟನೆ ನಡೆದಿದೆ. ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯ ವೇಳೆಯಲ್ಲಿ ಮೇಲ್ಚಾವಣಿ ಕುಸಿತವಾಗಿದೆ.


ಈ ದುರ್ಘಟನೆ ನಡೆದ ವೇಳೆ ಅದೃಷ್ಟವಶಾತ್ 180 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಫಾತಿಮತ್ ಸುಹಾನ,ರಶ್ಮಿ,ದೀಕ್ಷೀತ, ಯಶ್ಮಿತಾ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು ಆಸ್ಪ್ರತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಒಳಗೆ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಿದ ಶಿಕ್ಷಕರ ಬೇಜವಾಬ್ದಾರಿ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪುತ್ತೂರು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೂ ಪೋಷಕರು ದೂರು ನೀಡಿದ್ದಾರೆಂದು ತಿಳಿದುಬಂದಿದೆ.ಈ ಘಟನೆ ಸಂಬಂಧಪಟ್ಟಂತೆ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಕುಂತೂರು ಹಾಗೂ ಫೀಲ್ಡ್ ಇಂಜಿನಿಯರ್ನನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ವಿಪತ್ತು ಪರಿಹಾರ ನಿಧಿಯಲ್ಲಿ ಶಾಲೆ ರಿಪೇರಿಗೆ ಹಣ ಬಂದಿತ್ತು. ಈ ಹಿನ್ನಲೆ ಶಾಲೆಯಲ್ಲಿ ಮಕ್ಕಳನ್ನಿರಿಸಿಕೊಂಡು ರಿಪೇರಿ ಕಾರ್ಯ ಮಾಡುತ್ತಿದ್ದು, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.


