ಉಳ್ಳಾಲ : ನೂತನ ಗೃಹಪ್ರವೇಶಕ್ಕೂ ಹಿಂದಿನ ದಿನ ವಾಸ್ತು ಹೋಮ ನಡೆಯುತ್ತಿದ್ದ ಹೊಗೆ ತುಂಬಿದ್ದ ಮನೆಗೆ ಎಲ್ಲರ ಮುಂದೆನೇ ನುಗ್ಗಿದ ಕಳ್ಳನೋರ್ವನು ಮನೆಯೊಳಗಿದ್ದ ನಗದು ಕದ್ದೊಯ್ದದಲ್ಲದೆ,ಅದೇ ರಾತ್ರಿ ಪಕ್ಕದ ಮನೆಗೂ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ನಗ,ನಗದು ಕಳ್ಳತನ ನಡೆಸಿದ್ದು,ಕಳ್ಳನ ಕೈ ಚಳಕ ವೀಡಿಯೋದಲ್ಲಿ ದಾಖಲಾಗಿದೆ.

ಕಳೆದ ಡಿ.10 ರಂದು ರಾತ್ರಿ ತೊಕ್ಕೊಟ್ಟಿನ ಸ್ಮಿತಾ-ದಾಮೋದರ್ ದಂಪತಿ ಕೋಟೆಕಾರು ಪಟ್ಟಣ ವ್ಯಾಪ್ತಿಯ ಅಡ್ಕ ಬೈಲು ಎಂಬಲ್ಲಿ ತಾವು ನಿರ್ಮಸಿದ ನೂತನ ಮನೆಯಲ್ಲಿ ವಾಸ್ತು ಹೋಮ ನೆರವೇರಿಸಿದ್ದರು.ವಾಸ್ತು ಹೋಮ ನಡೆಯುತ್ತಿರುವಾಗಲೇ ಎಲ್ಲರ ಸಮ್ಮುಖದಲ್ಲೇ ಹೋಮದ ಹೊಗೆಯ ಲಾಭ ಎತ್ತಿ ಒಳ ನುಗ್ಗಿದ್ದ ಬರ್ಮುಡ ಧಾರಿ ಯುವಕನೋರ್ವ ಕೋಣೆಯೊಳಗೆ ನುಗ್ಗಿ ಬ್ಯಾಗೊಂದನ್ನ ಟೀ ಶರ್ಟ್ ಒಳಗಡೆ ಇಟ್ಟು ಹೊರನಡೆದಿದ್ದಾನೆ.
ಕೋಣೆಯೊಳಗಡೆ ಇದ್ದ ಬ್ಯಾಗಲ್ಲಿ 15,000 ರೂ.ನಗದು, ಮೊಬೈಲ್ ಚಾರ್ಜರ್ ಮತ್ತು ಬೆಲೆ ಬಾಳುವ ಕಾಸ್ಮೆಟಿಕ್ಸ್ ವಸ್ತುಗಳಿದ್ದವಂತೆ.ಕಳ್ಳ ಹೋಮ ನಡೆಯುತ್ತಿದ್ದ ವೇಳೆ ಮನೆಯೊಳಗಿನ ಕೋಣೆಗೆ ನುಗ್ಗಿ ಹೊರನಡೆಯುವ ದೃಶ್ಯ ವೃತ್ತಿಪರ ಕ್ಯಾಮೆರ ಮೆನ್ ನ ವೀಡಿಯೋದಲ್ಲಿ ದಾಖಲಾಗಿದೆ.

ಅದೇ ದಿನ ಮಧ್ಯ ರಾತ್ರಿ ಅಲ್ಲೇ ಸಮೀಪದ ಶಿವ ಸುಬ್ರಹ್ಮಣ್ಯ ಪ್ರಸಾದ್ ಭಟ್ ಎಂಬವರ ಮನೆಗೂ ರಾತ್ರಿ ಕನ್ನ ಹಾಕಿದ್ದ ಕಳ್ಳ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲನ್ನ ಒಡೆದು ಕೋಣೆಯೊಳಗಿನ ಕಬಾಟಲ್ಲಿದ್ದ 11,000 ರೂ.ನಗದು,32 ಗ್ರಾಂ ಚಿನ್ನ ,8 ಬೆಳ್ಳಿಯ ನಾಣ್ಯ,ಮತ್ತು 3 ರೇಡೋ ವಾಚ್ ಗಳು ಸೇರಿ ಒಟ್ಟು 1,49000 ರೂಪಾಯಿ ಮೌಲ್ಯದ ನಗ,ನಗದನ್ನ ಕದ್ದೊಯ್ದಿದ್ದಾನೆ.
ಬರ್ಮುಡ ಧಾರಿ ಕಳ್ಳನ ಜತೆ ಇನ್ನೋರ್ವನು ಇದ್ದು ಇವರಿಬ್ಬರು ಡಿ.10 ರ ರಾತ್ರಿ ಕಳ್ಳತನ ನಡೆದಿದ್ದ ಪ್ರದೇಶ ಅಡ್ಕ ಬೈಲಿಗೆ ದ್ವಿಚಕ್ರ ವಾಹನದಲ್ಲಿ ಬಂದು ಠಳಾಯಿಸುತ್ತಿರುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದೆ.

ಗೃಹ ಪ್ರವೇಶದ ಮನೆಯಲ್ಲಿ ಎಲ್ಲರ ಎದುರೇ ವಾಸ್ತು ಹೋಮದ ಹೊಗೆಯ ಲಾಭ ಎತ್ತಿ ಖುಲ್ಲಂ ,ಖುಲ್ಲಂ ಕಳ್ಳತನ ಮಾಡಿದ ಐನಾತಿ ಕಳ್ಳನ ಬಗ್ಗೆಯೇ ಅಡ್ಕ ಪರಿಸರದಲ್ಲಿ ಚರ್ಚೆ ನಡೆಯುತ್ತಿದೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು ವೀಡಿಯೋ ಫೂಟೇಜ್ ಆಧಾರದಲ್ಲಿ ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ.