ಮೈಸೂರು : ಮೈಸೂರಿನ ಬನ್ನಿಮಂಟಪದಲ್ಲಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (ಎಫ್‌ಇಎಸ್) ಕ್ವಾರ್ಟರ್ಸ್‌ನಲ್ಲಿ ಬುಧವಾರ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿಯೊಬ್ಬರ ನಿವಾಸದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಆರು ಜನರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ 32 ವರ್ಷದ ಗೀತಾ ಅವರಿಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿದ್ದರೆ, ಆಕೆಯ ಪತಿ ಮತ್ತು ಅಗ್ನಿಶಾಮಕ ಸಿಬ್ಬಂದಿ 38 ವರ್ಷದ ಮಹದೇವ್, ಅವರ ಎಂಟು ವರ್ಷದ ಮಗಳು ಮತ್ತು ಐದು ವರ್ಷದ ಮಗನಿಗೆ ಶೇ.20ರಷ್ಟು ಸುಟ್ಟ ಗಾಯಗಳಾಗಿವೆ.
ಅಕ್ಕಪಕ್ಕದ ಮನೆಯ ಇಬ್ಬರು ಮಹಿಳೆಯರಾದ ಸವಿತಾ ಮತ್ತು ಭಾಗ್ಯ ಅವರಿಗೂ ಶೇ.10 ರಿಂದ 15ರಷ್ಟು ಸುಟ್ಟ ಗಾಯಗಳಾಗಿವೆ.ಗಾಯಗೊಂಡವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿಯಿಡೀ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಈ ಘಟನೆ ಸಂಭವಿಸಿದೆ. ಬೆಳಗ್ಗೆ 7.30ರ ಸುಮಾರಿಗೆ ಗೀತಾ ಅಡುಗೆ ಕೋಣೆಗೆ ಹೋಗಿ ಒಲೆ ಹೊತ್ತಿಸಿದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಎಫ್‌ಇಎಸ್ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಮಹದೇವ್ ಅವರ ಮನೆ ಸಂಪೂರ್ಣ ಹಾನಿಯಾಗಿದ್ದು, ಅಕ್ಕಪಕ್ಕದ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.