ಉಳ್ಳಾಲ: 13 ಅಂತಸ್ತಿನ ಅಪಾರ್ಟ್ ಮೆಂಟ್ ವೊಂದರ ಪ್ಲ್ಯಾಟ್ ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿಯರು ಬಿಸಿ ಇಸ್ತ್ರಿ ಪೆಟ್ಟಿಗೆಯನ್ನ ಹಾಸಿಗೆ ಮೇಲಿಟ್ಟು ತೆರಳಿದ್ದ ವೇಳೆ ಹಾಸಿಗೆಗೆ ಬೆಂಕಿ ಹಚ್ಚಿದ್ದು ಅಪಾರ್ಟ್ ಮೆಂಟ್ ಮ್ಯಾನೇಜರ್ನ ಸಮಯ ಪ್ರಜ್ನೆಯಿಂದ ಸಂಭವನೀಯ ಭಾರೀ ಅಗ್ನಿ ಅನಾಹುತ ತಪ್ಪಿದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.

ದೇರಳಕಟ್ಟೆಯ ಕ್ಷೇಮ ಆಸ್ಪತ್ರೆ ಬಳಿಯಿರುವ ಫ್ಲಾಮ ನೆಸ್ಟ್ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ಸಂಖ್ಯೆ 202 ರಲ್ಲಿ ಅಗ್ನಿ ಅನಾಹುತ ನಡೆದಿದೆ.ಪ್ಲ್ಯಾಟ್ ನಲ್ಲಿ ತಂಗಿದ್ದ ದಂತ ವೈದ್ಯಕೀಯ ಇಬ್ಬರು ವಿದ್ಯಾರ್ಥಿನಿಯರು ನಿನ್ನೆ ಬೆಳಿಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರವಿದೆಯೆಂದು ಬೇಗನೇ ತೆರಳಿದ್ದರು.ಕಾಲೇಜಿಗೆ ತೆರಳುವ ತರಾತುರಿಯಲ್ಲಿ ವಿದ್ಯಾರ್ಥಿನಿಯರು ಬಟ್ಟೆಗಳಿಗೆ ಇಸ್ತ್ರಿ ಹಾಕಿ ಸ್ವಿಚ್ ಆಫ್ ಮಾಡಿ ಬಿಸಿ ಇಸ್ತ್ರಿ ಪೆಟ್ಟಿಗೆಯನ್ನ ಹಾಸಿಗೆ ಮೇಲಿಟ್ಟು ತೆರಳಿದ್ದಾರೆ.

ಬೆಳಗ್ಗಿನಿಂದ ಅಪಾರ್ಟ್ ಮೆಂಟ್ ನಿಂದ ಹೊಗೆಯ ವಾಸನೆ ಬರುತ್ತಿರುವುದನ್ನ ಅಲ್ಲಿನ ಮ್ಯಾನೇಜರ್ ಆಗಿರುವ ಕುತ್ತಾರು ನಿವಾಸಿ ಮಹಮ್ಮದ್ ಶಾಹಿದ್ ಶಫೀಕ್ ಗ್ರಹಿಸಿ ಕಟ್ಟಡದಲ್ಲಿ ಶೋಧ ನಡೆಸಿದ್ದಾರೆ.ಕೆಲ ಹೊತ್ತಿನ ನಂತರ 202 ಪ್ಲ್ಯಾಟ್ ಒಳಗಿಂದ ಹೊಗೆ ಬರುತ್ತಿರುವುದು ತಿಳಿದಿದೆ.ತಕ್ಷಣ ಇಬ್ಬರು ವಿದ್ಯಾರ್ಥಿನಿಯರನ್ನ ಶಫೀಕ್ ಅವರು ಸ್ಥಳಕ್ಕೆ ಕರೆಸಿ ಬೀಗ ತೆರೆದು ಒಳ ನುಗ್ಗಿದಾಗ ಹಾಸಿಗೆ ಹೊತ್ತಿ ಉರಿಯುತ್ತಿರುವುದನ್ನ ಕಂಡಿದ್ದಾರೆ.ಶಫೀಕ್ ಅವರು ವಾಚ್‌ಮೆನ್ ಲೋಕೇಶ್ ಸಹಕಾರದಿಂದ ಪ್ಲ್ಯಾಟ್ನ ಬಾಲ್ಕನಿಯಿಂದ ಬೆಂಕಿ ಆವರಿಸಿದ್ದ ಹಾಸಿಗೆಯನ್ನ ಕಟ್ಟಡದ ಕೆಳಕ್ಕೆ ಎಸೆದಿದ್ದಾರೆ.ಶಫೀಕ್ ಅವರ ಸಮಯ ಪ್ರಜ್ನೆಯಿಂದ ಕಟ್ಟಡದಲ್ಲಿದ್ದ 100 ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.