ಲಂಡನ್ : ಐವತ್ತು ವರ್ಷಗಳ ಸಂಶೋಧನೆಯ ಫಲವಾಗಿ ಅಸ್ತಮಾ ರೋಗಕ್ಕೆ ಹೊಸ ಔಷಧ ಕಂಡುಹುಡುಕಲಾಗಿದೆ. ಬೆನ್ರಾಲಿಜುಮಾಬ್ ಎನ್ನುವುದು ಅಸ್ತಮಾ ರೋಗಕ್ಕೆ ಹೊಸ ಔಷಧವಾಗಿದೆ. ಪ್ರಪಂಚದಾದ್ಯಂತ ಅಸ್ತಮಾ ಹಾಗೂ ಸಿಒಪಿಡಿಯಿಂದ ಬಳಲುತ್ತಿರುವ ಲಕ್ಷಾಂತರ ಜನರು ಈ ಹೊಸ ಔಷಧದಿಂದ ಪರಿಹಾರ ಪಡೆಯಲು ಸಾಧ್ಯವಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಪ್ರಾಯೋಜಿಸಲ್ಪಟ್ಟ ಲಂಡನ್‌ನ ಕಿಂಗ್ ಕಾಲೇಜ್‌ನ ವಿಜ್ಞಾನಿಗಳ ತಂಡವು ಈ ವಿಷಯದಲ್ಲಿ ನಡೆಸಿದ ಎರಡು ಹಂತಗಳ ಪ್ರಯೋಗದ ಫಲಿತಾಂಶವನ್ನು ದಿ ಲ್ಯಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಬೆನ್ರಾಲಿಝಮಾಬ್ ಎನ್ನುವ ಔಷಧವು ಮೊನೊಕ್ಲೋನಲ್‌ನ ಪ್ರತಿಕಾಯವಾಗಿದ್ದು ಶ್ವಾಸಕೋಶದ ಊರಿಯುತವನ್ನು ಕಡಿಮೆ ಮಾಡಲು ಇಯೊಸಿನೋಫಿಲ್ಸ್ ಎಂದು ಕರೆಯಲ್ಪಡುವ ಬಿಳಿರಕ್ತ ಕಣವನ್ನು ಗುರಿಯಾಗಿರಿಸುತ್ತದೆ. ಅಸ್ತಮಾ ಹಾಗೂ ಸಿಒಪಿಡಿ ಉಲ್ಬಣಗಳ ಚಿಕಿತ್ಸೆಯು ಕಳೆದ ಐವತ್ತು ವರ್ಷಗಳಲ್ಲಿ ಬದಲಾಗಿಲ್ಲ. ಪ್ರತಿವರ್ಷ ಅಸ್ತಮಾದಿಂದಾಗಿ ೩೮ ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಬೆನ್ರಾಲಿಜುಮಾಬ್ ಔಷಧವನ್ನು ತೀವ್ರ ಸ್ವರೂಪದ ಅಸ್ತಮಾ ರೋಗಕ್ಕೆ ಬಳಸಲಾಗುತ್ತಿದೆ. ಇದು ಪ್ರಸ್ತುತ ಲಭ್ಯವಿರುವ ಏಕೈಕ ಚಿಕಿತ್ಸೆಯಾಗಿರುವ ಸ್ಟಿರಾಯ್ಡ್ ಮಾತ್ರೆಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ.