ಕುಂದಾಪುರ : ಬೆಳ್ವೆ ಸಮೀಪದ ಗುಮ್ಮೋಲ್‌ನ ಅಣೆಕಟ್ಟಿನ ಬಳಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಡಿ.1ರ ಭಾನುವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿಗಳಾದ ಶ್ರೀಶ್ ಆಚಾರ್ಯ (13) ಮತ್ತು ಜಯಂತ್ ನಾಯಕ್ (14) ಎಂದು ಗುರುತಿಸಲಾಗಿದೆ. ಶ್ರೀಶ್ ಹೆಬ್ರಿಯ ಎಸ್ ಆರ್ ಎಸ್ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ.ವರದಿಗಳ ಪ್ರಕಾರ, ಶ್ರೀಶ್, ಜಯಂತ್ ಮತ್ತು ಇತರ ಇಬ್ಬರು ಹುಡುಗರು ಕಜ್ಕೆ-ಸಂತೆಕಟ್ಟೆ ಸಂಪರ್ಕ ರಸ್ತೆಯ ಗುಮ್ಮೋಲ್ ಚರ್ಚ್ ಹಿಂಭಾಗದಲ್ಲಿರುವ ವೆಂಟೆಡ್ ಡ್ಯಾಂ ಬಳಿ ಈಜಲು ಹೋಗಿದ್ದರು. ಶ್ರೀಶ್ ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದಿದ್ದು, ಜಯಂತ್ ಅವರನ್ನು ರಕ್ಷಿಸಲು ಧುಮುಕಿದ್ದಾರೆ. ದುರದೃಷ್ಟವಶಾತ್, ಇಬ್ಬರೂ ಹುಡುಗರು ನೀರಿನಲ್ಲಿ ಮುಳುಗಿದ್ದಾರೆ.
ಜೊತೆಯಲ್ಲಿದ್ದ ಇನ್ನಿತರರು ರಕ್ಷಣೆಗಾಗಿ ಅಂಗಲಾಚುತ್ತಿರುವಾಗ ಸ್ಥಳೀಯರ ತಕ್ಷಣ ಹುಡುಗರನ್ನು ಹುಡುಕಲು ಪ್ರಾರಂಭಿಸಿದ್ದಾರೆ . ಶಂಕರನಾರಾಯಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ವಲ್ಪ ಸಮಯದ ನಂತರ ಇಬ್ಬರ ಮೃತದೇಹ ಪತ್ತೆಯಾಗಿವೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.