ಉಳ್ಳಾಲ : ಶಿವಮೊಗ್ಗ ಬಾಂಬ್ ಟ್ರಯಲ್ ಮತ್ತು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಕೊಣಾಜೆ ನಡುಪದವು ಇಂಜಿನಿಯರಿಂಗ್ ಕಾಲೇಜಿಗೆ ದಾಳಿ ನಡೆಸಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವನನ್ನ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಬಾಂಬ್ ಟ್ರಯಲ್ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಪಿ.ಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದ. ಕಾಲೇಜಿನಲ್ಲಿ ಆತನ ದಾಖಲೆ ಇನ್ನಿತರ ಮಾಹಿತಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.ಶಂಕಿತ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಎಂಬ ಆರೋಪದಡಿ ಕೊಣಾಜೆಯ ಪಿ.ಎ ಕಾಲೇಜಿನ ಉಡುಪಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ತಾಜುದ್ದೀನ್ ಶೇಖ್ ಎಂಬಾತನನ್ನ ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.
ಕುಕ್ಕರ್ ಬಾಂಬ್ ಪ್ರಕರಣದಲ್ಲಿ ಬಂಧನದಲ್ಲಿರುವ ಶಂಕಿತ ಉಗ್ರ ಶಾರೀಕ್ ನನ್ನೂ ಬೆಂಗಳೂರಿನಲ್ಲಿ ವಿಚಾರಣೆ ನಡೆಸಿರುವ ಅಧಿಕಾರಿಗಳು ಇದೀಗ ಮಂಗಳೂರಿನ ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ 7 ಮಂದಿ ಎನ್ಐಎ ಅಧಿಕಾರಿಗಳು ಆಗಮಿಸಿದ್ದಾರೆ ಎನ್ನುವ ಮಾಹಿತಿಗಳಿವೆ.
ಮಂಗಳೂರಿನ ಕುಕ್ಕರ್ ಬಾಂಬ್ ಪ್ರಕರಣದ ಎರಡು ತಿಂಗಳ ಮೊದಲೇ ಶಿವಮೊಗ್ಗದಲ್ಲಿ ಬಾಂಬ್ ಟ್ರಯಲ್ ನಡೆಸಿರುವುದು ಪತ್ತೆಯಾಗಿತ್ತು. ಪ್ರಕರಣದಲ್ಲಿ ಮಂಗಳೂರಿನ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮಾಝ್ ಮುನೀರ್ ಮತ್ತು ಯಾಸಿನ್ ಎಂಬುವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಮೊಹಮ್ಮದ್ ಶಾರೀಕ್ ತಲೆಮರೆಸಿಕೊಂಡು ಬಳಿಕ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದ.
ಎನ್ಐಎ ಅಧಿಕಾರಿಗಳು ಈಗ ಶಿವಮೊಗ್ಗ ಮತ್ತು ಮಂಗಳೂರು ಬ್ಲಾಸ್ಟ್ ಪ್ರಕರಣದ ಬಗ್ಗೆ ಏಕಕಾಲದಲ್ಲಿ ತನಿಖೆ ನಡೆಸುತ್ತಿದ್ದಾರೆ.