ಬೆಳ್ತಂಗಡಿ : ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನದಿಗೆ ಈಜಲು ತೆರಳಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಕಜೆ ಅಣೆಕಟ್ಟು ಪ್ರದೇಶದಲ್ಲಿ ನಡೆದಿದೆ.


ಮೃತರನ್ನು ಮೂಡುಬಿದಿರೆಯ ಎಡಪದವು ಮೂಲದ ಲಾರೆನ್ಸ್ (20), ಬೆಳ್ತಂಗಡಿ ತಾಲೂಕಿನ ಪಾರೆಂಕಿಯ ಸೂರಜ್ (19), ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಜೈಸನ್ (19) ಎಂದು ಗುರುತಿಸಲಾಗಿದೆ. ಮೂವರೂ ಮಂಗಳೂರಿನ ಕಾಲೇಜೊಂದರ ನರ್ಸಿಂಗ್ ವಿದ್ಯಾರ್ಥಿಗಳು.
ಬೆಳ್ತಂಗಡಿಯ ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬುವವರ ಮನೆಗೆ ವೇಣೂರಿನ ಚರ್ಚ್ ಹಬ್ಬದಲ್ಲಿ ಪಾಲ್ಗೊಳ್ಳಲು ಯುವಕರು ಭೇಟಿ ನೀಡಿದ್ದರು. ಮಧ್ಯಾಹ್ನದ ಊಟದ ಬಳಿಕ ಮೂಡುಕೋಡಿ ಗ್ರಾಮದ ಬರ್ಕಜೆ ಅಣೆಕಟ್ಟೆಗೆ ಈಜಲು ತೆರಳಿದ್ದರು. ದುರದೃಷ್ಟವಶಾತ್, ಅವರು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು, ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳು ಈಜಲು ನದಿಗೆ ತೆರಳುವ ಮುನ್ನ ನಾಟಿಕಲ್ಲು ನೆಲ್ಲಿಕಾರ್ ನಲ್ಲಿರುವ ಸ್ನೇಹಿತರೊಬ್ಬರ ಮನೆಗೆ ಬಂದಿದ್ದರು ಎಂದು ವರದಿಯಾಗಿದೆ.