ಬೆಂಗಳೂರು ; ಚಂದನವನದಲ್ಲಿ ಖಳ ನಾಯಕನ ಪಾತ್ರಕ್ಕೆ ಹೆಸರುವಾಸಿ ಯಾಗಿದ್ದ ಹಾಗೂ ಹಿರಿಯ ನಟರಾಗಿದ್ದ ‘ಸೂರ್ಯವಂಶ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ಲಕ್ಷ್ಮಣ್ ಇಂದು (ಜನವರಿ 23) ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಕೆಲ ವರ್ಷಗಳಿಂದ ಬಳಲುತ್ತಿದ್ದ ಲಕ್ಷ್ಮಣ್ ಅವರು ಆಗಾಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಇಂದು ಬೆಳಿಗ್ಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಲಕ್ಷ್ಮಣ ಕೊನೆಯುಸಿರು ಎಳೆದಿದ್ದಾರೆ. ಮೂಡಲಪಾಳ್ಯದ ಅವರ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಂದೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಲಕ್ಷ್ಮಣ್ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಯಜಮಾನ, ಮಲ್ಲ, ಸೂರ್ಯವಂಶ ಹೀಗೆ ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ಲಕ್ಷ್ಮಣ್ ಪಾತ್ರ ಮಾಡಿದ್ದಾರೆ. ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಡಾ.ವಿಷ್ಣುವರ್ಧನ್, ರವಿಚಂದ್ರನ್, ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್, ಡಾ. ಅಂಬರೀಶ್ ಹೀಗೆ ಹಲವಾರು ದಿಗ್ಗಜ ನಟರೊಂದಿಗೆ ಪರದೆ ಹಂಚಿಕೊಂಡಿದ್ದಾರೆ.
ಲಕ್ಷ್ಮಣ್ ನಿಧನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಮತ್ತು ಸಿನಿಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.