ಮಂಗಳೂರು : ಸಿಟಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ಚಿನ್ನಾಭರಣ ಕದ್ದ ಆರೋಪಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕ್ಯಾಲಿಕಟ್ ಮೂಲದ ಫಿರೋಜ್ ಪದಾವತ್ (38) ಬಂಧಿತ ಆರೋಪಿ. ಈತನಿಂದ 2,37,600 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ತಲಾ 24 ಗ್ರಾಂ ತೂಕದ ಚಿನ್ನದ ಸರ ಮತ್ತು ಬಳೆ ಧರಿಸಿದ್ದರು. ಅದನ್ನೇ ಆರೋಪಿಗಳು ಕದ್ದೊಯ್ದಿದ್ದಾರೆ. ಈ ಕುರಿತು ರೈಲ್ವೆ ಪೊಲೀಸರಿಗೆ ವ್ಯಕ್ತಿ ದೂರು ನೀಡಿದ್ದರು.
ರೈಲ್ವೇ ಪೊಲೀಸ್ ಎಸ್‌ಪಿ ಡಾ.ಸೌಮ್ಯಲತಾ ಎಸ್‌ಕೆ ಮತ್ತು ಎಎಸ್‌ಪಿ ಗೀತಾ ಸಿ ಆರ್ ಅವರ ಮಾರ್ಗದರ್ಶನದಲ್ಲಿ ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ ವಿಶೇಷ ಅಪರಾಧ ಪತ್ತೆ ದಳ ರಚಿಸಿದ್ದರು.
ಡಿಸೆಂಬರ್ 16 ರಂದು ಕಣ್ಣೂರು-ಮಂಗಳೂರು ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


