ಉಳ್ಳಾಲ: ಡಿ.14 ಮುಂಜಾನೆ ಜಾಗಿಂಗ್ ಗೆ ತೆರಳಿದ್ದ ಯುವಕನೋರ್ವ ಮನೆಗೆ ಮರಳಿದ ಬಳಿಕ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿ ಸೈಟ್ ಎಂಬಲ್ಲಿ ನಡೆದಿದೆ.
ಅಸೈಗೋಳಿ ಸೈಟ್ನ ಅಯ್ಯಪ್ಪ ಮಂದಿರದ ಬಳಿಯ ನಿವಾಸಿ ಅಭಿಲಾಷ್ ಶೆಟ್ಟಿ(36)ಆತ್ಮಹತ್ಯೆಗೈದ ಯುವಕ.ಅಭಿಲಾಷ್ ಈ ಹಿಂದೆ ಮೆಡಿಕಲ್ ರೆಫ್ ಆಗಿ ಕೆಲಸ ಮಾಡುತ್ತಿದ್ದು ಕೆಲ ತಿಂಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದರೆನ್ನಲಾಗಿದೆ.ಅಭಿಲಾಷ್ ಕೆಲ ದಿನಗಳಿಂದ ಮನೋ ಖಿನ್ನತೆಗೊಳಗಾಗಿದ್ದರಂತೆ.ಇಂದು ಮುಂಜಾನೆ ಅವರು ಎಂದಿನಂತೆ ಜಾಗಿಂಗ್ ಗೆ ತೆರಳಿ ಮನೆಗೆ ಹಿಂದಿರುಗಿದ್ದಾರೆ.
ಬೆಳಗ್ಗೆ 10 ಗಂಟೆಯ ವೇಳೆ ಅಭಿಲಾಷ್ ತಾಯಿ ಮತ್ತು ಮನೆ ಮಂದಿ ಮದುವೆ ಸಮಾರಂಭಕ್ಕೆ ತೆರಳಿದ್ದು ಈ ವೇಳೆ ಅಭಿಲಾಷ್ ತನ್ನ ಕೋಣೆಯ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.ಮದುವೆಗೆ ತೆರಳದೆ ಮನೆಯಲ್ಲೇ ಉಳಿದಿದ್ದ ಅಭಿಲಾಷ್ ತಂದೆ ಮಗ ಕೋಣೆಯಿಂದ ಹೊರ ಬಾರದೇ ಇದ್ದಾಗ ಆತ್ಮಹತ್ಯೆ ಪ್ರಕರಣ ತಿಳಿದಿದೆ.
ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಭಿಲಾಷ್ ಮೊಬೈಲನ್ನ ವಶಕ್ಕೆ ಪಡೆದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.