ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ನಿಲ್ಲಿಸಿದ್ದ ಕಾರಿನ ಕಿಟಕಿ ಗಾಜುಗಳನ್ನು ಒಡೆದು ಚಿನ್ನಾಭರಣ ಹಾಗೂ ದಾಖಲೆ ಪತ್ರಗಳನ್ನು ದೋಚಿದ್ದ ಆರೋಪಿಗಳನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪ್ರಭಾಕರ ಹೊನ್ನವಳ್ಳಿ ಎಂದು ಗುರುತಿಸಲಾಗಿದೆ.
ಕೇರಳ ಮೂಲದ ಯಾತ್ರಾರ್ಥಿಯೊಬ್ಬರು ಅಕ್ಟೋಬರ್ 9 ರಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ತಮ್ಮ ಕಾರನ್ನು ದೇವಸ್ಥಾನದ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದರು. ಪೂಜೆ ಸಲ್ಲಿಸಿ ಹಿಂತಿರುಗಿದಾಗ ಕಾರಿನ ಹಿಂಬದಿಯ ಗಾಜು ಒಡೆದು ಕಾರಿನಲ್ಲಿದ್ದ ಚಿನ್ನಾಭರಣ ಹಾಗೂ ದಾಖಲೆ ಪತ್ರಗಳನ್ನು ಕಳವು ಮಾಡಲಾಗಿದೆ.
ಸುಬ್ರಹ್ಮಣ್ಯ ಠಾಣೆ ಎಸ್ಐ ಮುರಳೀಧರ ನಾಯಕ್, ಎಎಸ್ಐ ಕರುಣಾಕರ ಮತ್ತು ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕಳ್ಳನನ್ನು ಪತ್ತೆಹಚ್ಚಿ, ಸಮೀಪದ ಪ್ರದೇಶದಲ್ಲಿ ವಾಸವಾಗಿರುವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಪ್ರಭಾಕರ ನಿತ್ಯ ಅಪರಾಧಿಯಾಗಿದ್ದು, ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಕಳ್ಳತನ ಪ್ರಕರಣಗಳು ಇರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಗಳು ಈ ಹಿಂದೆಯೂ ಸುಬ್ರಹ್ಮಣ್ಯದಲ್ಲಿ ಇದೇ ರೀತಿಯಲ್ಲಿ ಮಾಲನ್ನು ಕಳವು ಮಾಡಿದ್ದರು. ಇತ್ತೀಚೆಗಷ್ಟೇ ಧರ್ಮಸ್ಥಳದಲ್ಲಿ ವಾಹನದ ವಸ್ತುಗಳನ್ನು ಕಳ್ಳತನ ಮಾಡಿದ್ದ.
ಪ್ರಭಾಕರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


