Saturday, November 21, 2026
Homeಜಿಲ್ಲೆಮಂಗಳೂರು : ವಿಮಾನ ನಿಲ್ದಾಣದ ಶುಲ್ಕ ಏರಿಕೆ ವಿರುದ್ಧ ಟ್ಯಾಕ್ಸಿ ಚಾಲಕರ ಪ್ರತಿಭಟನೆ : ನ.24ರಂದು...

ಮಂಗಳೂರು : ವಿಮಾನ ನಿಲ್ದಾಣದ ಶುಲ್ಕ ಏರಿಕೆ ವಿರುದ್ಧ ಟ್ಯಾಕ್ಸಿ ಚಾಲಕರ ಪ್ರತಿಭಟನೆ : ನ.24ರಂದು ದ.ಕ.–ಉಡುಪಿ ಟ್ಯಾಕ್ಸಿ ಬಂದ್..!

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಹಾಗೂ ವಾಣಿಜ್ಯ ವಾಹನಗಳಿಗೆ ಪಾರ್ಕಿಂಗ್ ಮತ್ತು ಪಿಕಪ್ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಟ್ಯಾಕ್ಸಿ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು. ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ನಡೆದ ಅನಿರ್ದಿಷ್ಟಾವಧಿ ಧರಣಿಯಲ್ಲಿ ನೂರಾರು ಟ್ಯಾಕ್ಸಿ ಚಾಲಕರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ರಘುಪತಿ ಭಟ್, ಯಾವುದೇ ಮುನ್ಸೂಚನೆ ನೀಡದೆ ಈ ಹಿಂದೆ ₹100 ಇದ್ದ ಶುಲ್ಕವನ್ನು ₹180 ಹಾಗೂ ₹500ಕ್ಕೆ ಏರಿಸಿರುವುದು ಚಾಲಕರಿಗೆ ಆರ್ಥಿಕ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಹನಗಳನ್ನು ಪಾರ್ಕಿಂಗ್ ಮಾಡದಿದ್ದರೂ ಉಚಿತ ಕಾಲಾವಕಾಶ ನೀಡದೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಖಾಸಗಿ ವಾಹನಗಳಿಗೆ 10 ನಿಮಿಷಗಳ ಉಚಿತ ಪಿಕಪ್ ಅವಕಾಶ ನೀಡಲಾಗುತ್ತಿದೆ. ಪ್ರವಾಸಿ ವಾಹನಗಳಿಗೂ ಇದೇ ಸೌಲಭ್ಯ ಕಲ್ಪಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿದವು.

ಆರು ಪ್ರಮುಖ ಬೇಡಿಕೆಗಳು

  1. ಟ್ಯಾಕ್ಸಿ ಮತ್ತು ಆಟೋಗಳಿಗೆ ವಿಧಿಸಿರುವ ₹50 ಪ್ರವೇಶ ಶುಲ್ಕ ಹಿಂಪಡೆಯಬೇಕು.
  2. ಹೆಚ್ಚಿಸಿರುವ ಪಾರ್ಕಿಂಗ್ ಶುಲ್ಕವನ್ನು ಹಳೆಯ ದರಕ್ಕೆ ಇಳಿಸಬೇಕು.
  3. ಪ್ರವಾಸಿ ವಾಹನಗಳಿಗೂ 10 ನಿಮಿಷ ಉಚಿತ ಪಿಕಪ್ ಅವಕಾಶ ನೀಡಬೇಕು.
  4. ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಬೇಕು.
  5. ಚಾಲಕ-ಮಾಲಕರಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು.
  6. ಮ್ಯಾಕ್ಸಿಕ್ಯಾಬ್‌ಗಳಿಗೆ ₹200 ಶುಲ್ಕ ನಿಗದಿಪಡಿಸಿ 10 ನಿಮಿಷ ಡ್ರಾಪ್ ಅವಧಿ ನೀಡಬೇಕು.

ನವೆಂಬರ್ 24ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಟ್ಯಾಕ್ಸಿ ಬಂದ್‌ಗೆ ಸಂಘಟನೆಗಳು ಕರೆ ನೀಡಿವೆ. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಪ್ರತಿಭಟನೆಯಲ್ಲಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಆನಂದ್ ಕೆ., ಹರೀಶ್ ಕುಮಾರ್, ಪ್ರಮೋದ್ ಉಳ್ಳಾಲ್, ಭಾರತ್ ಕುಮಾರ್ ಮಂಗಳಾದೇವಿ, ಅನ್ಸರ್, ರಾಜೇಶ್, ಲೋಕೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular