Monday, November 9, 2026
Homeರಾಜ್ಯಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಶುಲ್ಕ ಏರಿಕೆ ಬರೆ ? ಸೇವಾ ಶುಲ್ಕ ಪರಿಷ್ಕರಣೆಗೆ...

ಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಶುಲ್ಕ ಏರಿಕೆ ಬರೆ ? ಸೇವಾ ಶುಲ್ಕ ಪರಿಷ್ಕರಣೆಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ..!

ಬೆಂಗಳೂರು : ಈಗಾಗಲೇ ದಿನಬಳಕೆಯ ವಸ್ತುಗಳು, ಹಾಲಿನ ಉತ್ಪನ್ನಗಳು ಹಾಗೂ ಬಸ್ ಪ್ರಯಾಣ ದರ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಆರ್ಥಿಕ ಹೊರೆ ಬೀಳುವ ಸಾಧ್ಯತೆ ಎದುರಾಗಿದೆ. 2027-28ನೇ ಸಾಲಿನ ಬಜೆಟ್ ಸಿದ್ಧತೆ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಸೇವಾ ಶುಲ್ಕ, ಸೆಸ್ ಹಾಗೂ ಬಳಕೆದಾರರ ಶುಲ್ಕಗಳನ್ನು ಹಣದುಬ್ಬರಕ್ಕೆ ಅನುಗುಣವಾಗಿ ಪರಿಷ್ಕರಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಆರ್ಥಿಕ ಇಲಾಖೆಯು ನವೆಂಬರ್ 3ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ಸೇವಾ ಶುಲ್ಕ, ಸೆಸ್ ಅಥವಾ ಬಳಕೆದಾರರ ಶುಲ್ಕಗಳನ್ನು ಪರಿಷ್ಕರಿಸದ ಇಲಾಖೆಗಳು 2027-28ನೇ ಆರ್ಥಿಕ ಸಾಲಿನ ಆರಂಭಕ್ಕೂ ಮುನ್ನ ಕಡ್ಡಾಯವಾಗಿ ದರ ಪರಿಷ್ಕರಣೆ ಮಾಡಬೇಕು ಎಂದು ಸೂಚಿಸಲಾಗಿದೆ.

ಮೂರು ವರ್ಷಗಳಿಂದ ಪರಿಷ್ಕರಣೆಯಾಗದ ಶುಲ್ಕಗಳಿಗೆ ಹೊಸ ದರ!

ರಾಜ್ಯ ಸರ್ಕಾರದ ಆಡಳಿತ ಇಲಾಖೆಗಳು ಬಳಕೆ ಶುಲ್ಕಗಳನ್ನು ಕಾಲಕಾಲಕ್ಕೆ ಪರಿಷ್ಕರಿಸದಿರುವುದು ಹಾಗೂ ನಿಯಮಿತ ಮೇಲ್ವಿಚಾರಣೆಯ ಕೊರತೆಯಿಂದ ತೆರಿಗೆಯೇತರ ರಾಜಸ್ವ ಸಂಗ್ರಹದಲ್ಲಿ ನಿರೀಕ್ಷಿತ ಏರಿಕೆಯಾಗಿಲ್ಲ ಎಂದು ಆರ್ಥಿಕ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.

ಹಣಕಾಸು ಆಯೋಗಗಳ ಶಿಫಾರಸು ಹಾಗೂ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲೂ ಬಳಕೆ ಶುಲ್ಕಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುವ ಕುರಿತು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ 2025-26 ಮತ್ತು 2026-27ನೇ ಸಾಲಿನಲ್ಲಿ ದರ ಪರಿಷ್ಕರಣೆ ಮಾಡದ ಇಲಾಖೆಗಳು ತಕ್ಷಣವೇ ಕ್ರಮ ಕೈಗೊಂಡು ಮುಂದಿನ ಬಜೆಟ್‌ಗೆ ಮುನ್ನ ಪರಿಷ್ಕೃತ ದರಗಳ ಅಂದಾಜು ಸಲ್ಲಿಸುವಂತೆ ಸೂಚಿಸಲಾಗಿದೆ.

ವಸೂಲಿಯಾಗದ ಸರ್ಕಾರಿ ಸಾಲಗಳ ಬಗ್ಗೆ ಕಳವಳ

ರಾಜ್ಯ ಸರ್ಕಾರವು ಮಾರುಕಟ್ಟೆಯಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ಬಂಡವಾಳ ಹೂಡಿಕೆ ಮಾಡುತ್ತಿದ್ದರೂ, ಈ ಹೂಡಿಕೆಗಳಿಂದ ಬರುತ್ತಿರುವ ಆದಾಯದ ಪ್ರಮಾಣ ಕಡಿಮೆಯಿದೆ.

ಇನ್ನೊಂದೆಡೆ ಸರ್ಕಾರಿ ಕಂಪನಿಗಳು, ನಿಗಮ-ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಸಂಘಗಳು ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ನೀಡಿರುವ ಸಾಲಗಳ ಪ್ರಮಾಣ ದೊಡ್ಡದಿದ್ದರೂ, ಸಾಲ ವಸೂಲಾತಿಯಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ.

ಹೀಗಾಗಿ 2027-28ನೇ ಸಾಲಿನಲ್ಲಿ ಸಾಲದ ಅಸಲು ಮತ್ತು ಬಡ್ಡಿ ವಸೂಲಾತಿಗೆ ಸಂಬಂಧಿಸಿದಂತೆ ವಾಸ್ತವಿಕ ಅಂದಾಜುಗಳನ್ನು ಸಿದ್ಧಪಡಿಸುವಂತೆ ಆರ್ಥಿಕ ಇಲಾಖೆ ನಿರ್ದೇಶನ ನೀಡಿದೆ.

‘ಇತರ ಸ್ವೀಕೃತಿ’ ಲೆಕ್ಕಪತ್ರಕ್ಕೆ ಕಡಿವಾಣ

ರಾಜಸ್ವ ಸಂಗ್ರಹದ ಲೆಕ್ಕಾಚಾರದಲ್ಲಿ ಪಾರದರ್ಶಕತೆ ತರಲು ಸರ್ಕಾರ ಮುಂದಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಗುರುತಿಸಿರುವ ಲೆಕ್ಕಪತ್ರದ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ‘800-ಇತರ ಸ್ವೀಕೃತಿಗಳು’ ಎಂಬ ಶೀರ್ಷಿಕೆಯಡಿ ಆದಾಯವನ್ನು ಒಟ್ಟುಗೂಡಿಸುವ ಪದ್ಧತಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.

ಕೆಲವು ಇಲಾಖೆಗಳು ತಾವು ಸಂಗ್ರಹಿಸಿದ ರಾಜಸ್ವವನ್ನು ನಿರ್ದಿಷ್ಟ ಸೇವೆಗಳ ಹೆಸರಿನಲ್ಲಿ ತೋರಿಸದೆ ‘800-ಇತರ ಸ್ವೀಕೃತಿಗಳು’ ಎಂಬ ಶೀರ್ಷಿಕೆಯಡಿ ದಾಖಲಿಸುತ್ತಿರುವುದರಿಂದ ಯಾವ ಇಲಾಖೆಯ ಯಾವ ಸೇವೆಯಿಂದ ಎಷ್ಟು ಆದಾಯ ಬಂದಿದೆ ಎಂಬ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗುತ್ತಿಲ್ಲ.

ಮುಂದಿನ ಆಯವ್ಯಯದಲ್ಲಿ ಎಲ್ಲ ಸ್ವೀಕೃತಿಗಳನ್ನು ಸೂಕ್ತ ಉಪ ಲೆಕ್ಕ ಶೀರ್ಷಿಕೆಯಡಿ ಕಡ್ಡಾಯವಾಗಿ ದಾಖಲಿಸಬೇಕು. ಈ ಕುರಿತು ಗೊಂದಲವಿದ್ದರೆ ಆರ್ಥಿಕ ಇಲಾಖೆಯಿಂದ ಸ್ಪಷ್ಟನೆ ಪಡೆಯುವಂತೆಯೂ ಸೂಚಿಸಲಾಗಿದೆ.

ಜನಸಾಮಾನ್ಯರಿಗೆ ಹೆಚ್ಚುವರಿ ಹೊರೆ ಬೀಳುತ್ತದೆಯೇ?

ಸೇವಾ ಶುಲ್ಕಗಳ ಪರಿಷ್ಕರಣೆ, ಸರ್ಕಾರಿ ಸಾಲಗಳ ವಸೂಲಾತಿ ಹಾಗೂ ರಾಜಸ್ವ ಲೆಕ್ಕಪತ್ರದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಹಲವು ನಿರ್ದೇಶನಗಳನ್ನು ನೀಡಿದೆ. ಆದರೆ ಯಾವ ಯಾವ ಇಲಾಖೆಗಳ ಯಾವ ಸೇವೆಗಳ ಶುಲ್ಕ ಎಷ್ಟು ಹೆಚ್ಚಳವಾಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಈ ನಿರ್ದೇಶನಗಳ ಪರಿಣಾಮವಾಗಿ ಸರ್ಕಾರಿ ಸೇವೆಗಳ ಬಳಕೆ ವೆಚ್ಚ ಹೆಚ್ಚಾಗುತ್ತದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಈಗಾಗಲೇ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ಜನತೆಗೆ ಮುಂಬರುವ ಬಜೆಟ್‌ನಲ್ಲಿ ಮತ್ತೊಂದು ಆರ್ಥಿಕ ಹೊರೆ ಎದುರಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular