ಚಿಕ್ಕಮಗಳೂರು: ದೇವಿರಮ್ಮ ಬೆಟ್ಟದಲ್ಲಿ ದೇವಿಯ ದರ್ಶನಕ್ಕಾಗಿ ನಿರೀಕ್ಷೆಗೂ ಮೀರಿ ಭಕ್ತ ಸಾಗರವೇ ಹರಿದುಬಂದಿದ್ದು, ಈ ವೇಳೆ ಬೆಟ್ಟದ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಕಂಬಿ ಮುರಿದು ಅವಘಡ ಸಂಭವಿಸಿದೆ.
ಕಂಬಿ ಮುರಿದ ಪರಿಣಾಮ ಭಕ್ತರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ಓರ್ವ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ದೇವಿರಮ್ಮ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಬೆಟ್ಟದ ಮೇಲ್ಭಾಗದಲ್ಲಿ ಭಾರೀ ಜನದಟ್ಟಣೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಕಬ್ಬಿಣದ ಕಂಬಿ ಮುರಿದು ಭಕ್ತರು ಕೆಳಕ್ಕೆ ಬಿದ್ದಿದ್ದಾರೆ.
ಗಾಯಗೊಂಡ ಭಕ್ತರನ್ನು ತಕ್ಷಣವೇ ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಟ್ಟದ ಮೇಲ್ಭಾಗದಿಂದ ಗಾಯಾಳುಗಳನ್ನು ಕೆಳಕ್ಕೆ ಹೊತ್ತು ತರುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಿರತರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ದೇವಿರಮ್ಮ ಬೆಟ್ಟದಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

