Sunday, November 8, 2026
Homeಜಿಲ್ಲೆಶಿವಮೊಗ್ಗ : ಪ್ರಯಾಣಿಕನ ಜೀವ ಉಳಿಸಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ : ಮಾನವೀಯತೆಗೆ ಸಾರ್ವಜನಿಕರ ಮೆಚ್ಚುಗೆ..!

ಶಿವಮೊಗ್ಗ : ಪ್ರಯಾಣಿಕನ ಜೀವ ಉಳಿಸಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ : ಮಾನವೀಯತೆಗೆ ಸಾರ್ವಜನಿಕರ ಮೆಚ್ಚುಗೆ..!

ಶಿವಮೊಗ್ಗ : ಪ್ರಯಾಣಿಕನೊಬ್ಬನಿಗೆ ಬಸ್‌ನಲ್ಲೇ ದಿಢೀರ್ ಎದೆನೋವು ಕಾಣಿಸಿಕೊಂಡಾಗ, ಆಂಬ್ಯುಲೆನ್ಸ್‌ಗಾಗಿ ಕಾಯದೆ ಬಸ್ಸನ್ನೇ ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದ ಕೆಎಸ್‌ಆರ್‌ಟಿಸಿ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.

ಸಾಗರದಿಂದ ಹೊಸನಗರಕ್ಕೆ ಪ್ರಯಾಣಿಸುತ್ತಿದ್ದ ಸೋನಲೆ ಗ್ರಾಮೀಣ ಬ್ಯಾಂಕ್ ಉದ್ಯೋಗಿ ವಿಶ್ವನಾಥ್ ಅವರಿಗೆ ಮಾರ್ಗಮಧ್ಯೆ ದಿಢೀರ್ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.

ಇದನ್ನು ಗಮನಿಸಿದ ಬಸ್ ಚಾಲಕ ಮೋಹನ್ ಹಾಗೂ ನಿರ್ವಾಹಕ ಪರಮೇಶ್ವರ್ ಟಿ. ನಾಯ್ಕ ಅವರು ಕ್ಷಣಮಾತ್ರವೂ ತಡಮಾಡದೆ ಸಮಯಪ್ರಜ್ಞೆ ಮೆರೆದಿದ್ದಾರೆ. ಆಂಬ್ಯುಲೆನ್ಸ್ ಬರುವುದಕ್ಕಾಗಿ ಕಾಯದೆ, ಪ್ರಯಾಣಿಕನ ಜೀವ ರಕ್ಷಣೆಗೆ ಆದ್ಯತೆ ನೀಡಿ ಬಸ್ಸನ್ನೇ ನೇರವಾಗಿ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಗೋಲ್ಡನ್ ಅವರ್‌ನಲ್ಲೇ ಆಸ್ಪತ್ರೆಗೆ ದಾಖಲಾದ ವಿಶ್ವನಾಥ್ ಅವರಿಗೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.

ತುರ್ತು ಸಂದರ್ಭದಲ್ಲಿ ಮಾನವೀಯತೆ ಮತ್ತು ಕರ್ತವ್ಯಪ್ರಜ್ಞೆ ಮೆರೆದ ಚಾಲಕ ಮೋಹನ್ ಹಾಗೂ ನಿರ್ವಾಹಕ ಪರಮೇಶ್ವರ್ ಟಿ. ನಾಯ್ಕ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸಂಕಷ್ಟದ ಸಮಯದಲ್ಲಿ ತೋರಿದ ಈ ಸಮಯೋಚಿತ ನೆರವು ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಮಾನವೀಯ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular