Saturday, November 7, 2026
Homeಜಿಲ್ಲೆಉಡುಪಿ : 17ಕ್ಕೂ ಹೆಚ್ಚು ಉದ್ಯಮಿಗಳಿಗೆ ಕೊಲೆ ಬೆದರಿಕೆ : ಮಲೇಷ್ಯಾದಲ್ಲಿ ಭೂಗತ ಕ್ರಿಮಿನಲ್ ಹೇಮಂತ್...

ಉಡುಪಿ : 17ಕ್ಕೂ ಹೆಚ್ಚು ಉದ್ಯಮಿಗಳಿಗೆ ಕೊಲೆ ಬೆದರಿಕೆ : ಮಲೇಷ್ಯಾದಲ್ಲಿ ಭೂಗತ ಕ್ರಿಮಿನಲ್ ಹೇಮಂತ್ ಪೂಜಾರಿ ವಶಕ್ಕೆ.?

ಉಡುಪಿ : ಜಿಲ್ಲೆಯ ಉದ್ಯಮಿಗಳು, ಬಿಲ್ಡರ್‌ಗಳು, ಹೋಟೆಲ್ ಮಾಲೀಕರು ಹಾಗೂ ಗುತ್ತಿಗೆದಾರರಿಗೆ ಅಂತರಾಷ್ಟ್ರೀಯ ದೂರವಾಣಿ ಕರೆಗಳ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಭೂಗತ ಕ್ರಿಮಿನಲ್ ಹೇಮಂತ್ ಪೂಜಾರಿಯನ್ನು ಮುಂಬೈ ಪೊಲೀಸರು ಮಲೇಷ್ಯಾದಲ್ಲಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಹೇಮಂತ್ ಪೂಜಾರಿ ಅಲಿಯಾಸ್ ‘ಎಚ್.ಪಿ.’ ಎಂಬಾತ ಉಡುಪಿ ಜಿಲ್ಲೆಯ 17ಕ್ಕೂ ಹೆಚ್ಚು ಉದ್ಯಮಿಗಳು, ಬಿಲ್ಡರ್‌ಗಳು, ಹೋಟೆಲ್ ಉದ್ಯಮಿಗಳು, ಸಿವಿಲ್ ಕಾಂಟ್ರಾಕ್ಟರ್‌ಗಳು, ರಾಜಕಾರಣಿಗಳು ಹಾಗೂ ಪ್ರಮುಖ ಕಂಪನಿಗಳ ಮುಖ್ಯಸ್ಥರಿಗೆ ಅಂತರಾಷ್ಟ್ರೀಯ ಮೊಬೈಲ್ ಕರೆ ಮಾಡಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಹಣ ನೀಡದಿದ್ದಲ್ಲಿ ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು.

ಉದ್ಯಮಿ ಡೇವಿಡ್ ಹತ್ಯೆ ಪ್ರಕರಣದಲ್ಲೂ ಆರೋಪ

ಕಳೆದ ಸೆಪ್ಟೆಂಬರ್‌ನಲ್ಲಿ ಮುದರಂಗಡಿಯ ಉದ್ಯಮಿ ಡೇವಿಡ್ ಅವರನ್ನು ಹೇಮಂತ್ ಪೂಜಾರಿಯ ಸಹಚರರು ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 10 ಮಂದಿಯನ್ನು ಬಂಧಿಸಿದ್ದು, ಹೇಮಂತ್ ಪೂಜಾರಿಯನ್ನು 11ನೇ ಆರೋಪಿಯಾಗಿ ಹೆಸರಿಸಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಾಲ್ಕು ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣ ದಾಖಲು

ಕಳೆದ ಅಕ್ಟೋಬರ್‌ನಲ್ಲಿ ಹೇಮಂತ್ ಪೂಜಾರಿ ವಿರುದ್ಧ ಶಿರ್ವ, ಪಡುಬಿದ್ರಿ, ಕಾಪು ಹಾಗೂ ಮಣಿಪಾಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ.

ಉದ್ಯಮಿಗಳ ಮೊಬೈಲ್ ಸಂಖ್ಯೆಗಳು ಹಾಗೂ ವೈಯಕ್ತಿಕ ಮಾಹಿತಿಯನ್ನು ಹೇಮಂತ್ ಪೂಜಾರಿಗೆ ಒದಗಿಸುತ್ತಿದ್ದ ಆರೋಪದ ಮೇಲೆ ಎರ್ಮಾಳು ಬಡಾ ನಿವಾಸಿ ಸುರೇಶ್ ಅಮೀನ್ (38) ಮತ್ತು ಸಾಂತೂರಿನ ಹರೀಶ್ ಪೂಜಾರಿ (45) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಇದಲ್ಲದೆ, ತನ್ನ ಸಹಚರರ ಬಂಧನಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೂ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

RAW ನೆರವಿನೊಂದಿಗೆ ಕಾರ್ಯಾಚರಣೆ?

ಇತ್ತೀಚೆಗೆ ಬೆದರಿಕೆ ಎದುರಿಸಿದ್ದ ಉಡುಪಿಯ ಉದ್ಯಮಿಯೊಬ್ಬರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆಪ್ತರೆನ್ನಲಾದ ಉದ್ಯಮಿಯ ಮೂಲಕ ಪ್ರಭಾವ ಬೀರಿ, ಹೇಮಂತ್ ಪೂಜಾರಿಯ ಬಂಧನಕ್ಕೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅಂತರಾಷ್ಟ್ರೀಯ ಗುಪ್ತಚರ ಸಂಸ್ಥೆ ‘ರಾ’ (RAW) ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಹೇಮಂತ್ ಪೂಜಾರಿ ಮಲೇಷ್ಯಾದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದಿದ್ದರು ಎಂದು ವರದಿಯಾಗಿದೆ.

ಬಳಿಕ ಮುಂಬೈನಲ್ಲಿದ್ದ ಆತನ ಆಪ್ತರೊಬ್ಬರ ನೆರವಿನಿಂದ ಮಲೇಷ್ಯಾದಲ್ಲಿ ಕಾರ್ಯಾಚರಣೆ ನಡೆಸಿ ಹೇಮಂತ್ ಪೂಜಾರಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೋಟೆಲ್ ಉದ್ಯಮಿ ಹತ್ಯೆಗೆ ₹40 ಲಕ್ಷ ಸಂಗ್ರಹ?

ವಿಚಾರಣೆ ವೇಳೆ ಹೆಸರಾಂತ ಹೋಟೆಲ್ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾಗಿ ಹಾಗೂ ಅದಕ್ಕಾಗಿ ಸುಮಾರು ₹40 ಲಕ್ಷ ಹಣ ಸಂಗ್ರಹಿಸಿದ್ದಾಗಿ ಹೇಮಂತ್ ಪೂಜಾರಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಭಾರತಕ್ಕೆ ಕರೆತರಲು ಕಾನೂನು ಪ್ರಕ್ರಿಯೆ

ಹೇಮಂತ್ ಪೂಜಾರಿಯನ್ನು ಭಾರತಕ್ಕೆ ಕರೆತರಲು ಅಂತರಾಷ್ಟ್ರೀಯ ಕಾನೂನು ಪ್ರಕ್ರಿಯೆಗಳು ಹಾಗೂ ಇತರ ತಾಂತ್ರಿಕ ತೊಡಕುಗಳಿದ್ದು, ಅವುಗಳನ್ನು ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular