Tuesday, October 27, 2026
Homeಗ್ಯಾಜೆಟ್ / ಟೆಕ್ನವದೆಹಲಿ : ಶೇ. 100 ಎಥೆನಾಲ್ ವಾಹನಗಳಿಗೆ ಕೇಂದ್ರದ ಅಸ್ತು ; ಮೋಟಾರು ವಾಹನ ನಿಯಮಗಳಿಗೆ...

ನವದೆಹಲಿ : ಶೇ. 100 ಎಥೆನಾಲ್ ವಾಹನಗಳಿಗೆ ಕೇಂದ್ರದ ಅಸ್ತು ; ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ.

ನವದೆಹಲಿ : ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು, ಶೇ. 85ರಷ್ಟು ಎಥೆನಾಲ್ ಮಿಶ್ರಿತ ಇ85 ಹಾಗೂ ಶೇ. 100ರಷ್ಟು ಎಥೆನಾಲ್ ಬಳಸುವ ಇ100 ವಾಹನಗಳಿಗೆ ಅಧಿಕೃತ ಅನುಮೋದನೆ ನೀಡಲಾಗಿದೆ.

ಈ ತಿದ್ದುಪಡಿಯಿಂದ ಇ20 ಇಂಧನದ ಜೊತೆಗೆ ಇ85 ಮತ್ತು ಇ100 ಇಂಧನದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ವಾಹನಗಳಿಗೂ ನಿಯಮಬದ್ಧ ಅವಕಾಶ ದೊರೆತಿದೆ. ಆದರೆ ಇ20 ಅಥವಾ ಸಾಮಾನ್ಯ ಪೆಟ್ರೋಲ್‌ಗಾಗಿ ವಿನ್ಯಾಸಗೊಳಿಸಲಾದ ಸಾಂಪ್ರದಾಯಿಕ ವಾಹನಗಳಲ್ಲಿ ಇ85 ಅಥವಾ ಇ100 ಇಂಧನ ಬಳಸಲು ಅನುಮತಿ ಇರುವುದಿಲ್ಲ. ಈ ಇಂಧನಗಳನ್ನು ಬಳಸಲು ವಾಹನಗಳು ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಅಗತ್ಯ ಪ್ರಮಾಣೀಕರಣ ಪಡೆದಿರಬೇಕು ಎಂದು ರಸ್ತೆ ಸಾರಿಗೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ವಾಹನಗಳ ತೂಕದ ಮಿತಿಯೂ ಹೆಚ್ಚಳ

ತಿದ್ದುಪಡಿಯ ಮತ್ತೊಂದು ಪ್ರಮುಖ ಅಂಶವೆಂದರೆ, ನಿಯಮಗಳಿಗೆ ಅನುಗುಣವಾಗಿರುವ ಲಘು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಗರಿಷ್ಠ ತೂಕದ ಮಿತಿಯನ್ನು 3,000 ಕೆ.ಜಿ.ಯಿಂದ 3,500 ಕೆ.ಜಿ.ಗೆ ಹೆಚ್ಚಿಸಲಾಗಿದೆ.

ಆಮದು ತೈಲ ಅವಲಂಬನೆ ತಗ್ಗಿಸುವ ಉದ್ದೇಶ

ಭಾರತವು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಎಥೆನಾಲ್ ಮಿಶ್ರಿತ ಇಂಧನ ಬಳಕೆಗೆ ಉತ್ತೇಜನ ನೀಡುತ್ತಿದೆ. ಈಗಾಗಲೇ ದೇಶದಲ್ಲಿ ಇ20 ಇಂಧನ ಬಳಕೆಯಲ್ಲಿದೆ.

ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಚಲಿಸುವ ವಾಹನಗಳ ಅಭಿವೃದ್ಧಿಗೆ ಮುಂದಾಗಿವೆ. ಟೊಯೋಟಾ ಮತ್ತು ಹುಂಡೈ ಸೇರಿದಂತೆ ಇತರ ಕಂಪನಿಗಳೂ ಪ್ಲೆಕ್ಸ್-ಫ್ಯುಯೆಲ್ ತಂತ್ರಜ್ಞಾನದ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿವೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳು ಹಾಗೂ ಜಾಗತಿಕ ಇಂಧನ ಪೂರೈಕೆಯಲ್ಲಿನ ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ಪರ್ಯಾಯ ಇಂಧನಗಳ ಬಳಕೆಗೆ ಉತ್ತೇಜನ ನೀಡುವುದು ಮಹತ್ವ ಪಡೆದಿದೆ. ಎಥೆನಾಲ್ ಆಧಾರಿತ ವಾಹನಗಳ ಬಳಕೆ ಹೆಚ್ಚಾದರೆ ಪೆಟ್ರೋಲ್ ಬಳಕೆ ಮತ್ತು ಆಮದು ತೈಲದ ಮೇಲಿನ ಅವಲಂಬನೆಯನ್ನು ತಗ್ಗಿಸಲು ನೆರವಾಗಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular