ಮಂಗಳೂರು : ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸ್ಕೂಟರ್ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಅಕ್ಟೋಬರ್ 19ರಂದು ನಡೆದಿದೆ. ಮೃತರನ್ನು ಮೊಹಮ್ಮದ್ ಝುನೈದ್ (23) ಮತ್ತು ಮೊಹಮ್ಮದ್ ಅಫ್ರಾಝ್ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಿಕಪ್ ಚಾಲಕ ಹಫೀಜ್ ಅಲಿಯಾಸ್ ಅಪ್ಪಿ ವಿರುದ್ಧ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೊಲೆ ಮಾಡಿರುವ ಆರೋಪವನ್ನು ಮೃತ ಝುನೈದ್ ಅವರ ತಂದೆ ಮಾಡಿದ್ದರು ಈ ದೂರಿನ ಹಿನ್ನೆಲೆ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಳಿಸಿದ್ದಾರೆ.
ರಂತಡ್ಕ ಕ್ರಾಸ್ನಲ್ಲಿ ಜಗಳ ನಡೆದಿತ್ತೆಂಬ ಆರೋಪ
ಮೃತ ಝುನೈದ್ ಕಲ್ಲಾಪಿನ ಗ್ಲೋಬಲ್ ಮಾರ್ಕೆಟ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 19ರಂದು ಬೆಳಿಗ್ಗೆ ಕೆಲಸಕ್ಕೆ ತೆರಳಿ, ಬೆಳಿಗ್ಗೆ 11 ಗಂಟೆಗೆ ಮನೆಗೆ ವಾಪಸಾಗಿದ್ದರು. ಬಳಿಕ ಮಧ್ಯಾಹ್ನ ಊಟ ಮಾಡಿ ಸುಮಾರು 1.30ಕ್ಕೆ ನೆರೆಮನೆಯ ಮೊಹಮ್ಮದ್ ಅಫ್ರಾಝ್ ಜೊತೆ ಸ್ಕೂಟರ್ನಲ್ಲಿ ತೆರಳಿದ್ದರು ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಪ್ರಕಾರ, ಸಂಜೆ ಸುಮಾರು 4 ಗಂಟೆಗೆ ರಂತಡ್ಕ ಕ್ರಾಸ್ ಬಳಿ ಝುನೈದ್ ಮತ್ತು ಅಫ್ರಾಝ್ ಹಾಗೂ ಸ್ಥಳೀಯ ನಿವಾಸಿ, ಪಿಕಪ್ ಚಾಲಕ ಹಫೀಜ್ ಅಲಿಯಾಸ್ ಅಪ್ಪಿ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಜಗಳವಾಗಿತ್ತು ಎನ್ನಲಾಗಿದೆ. ಬಳಿಕ ಇಬ್ಬರು ಯುವಕರು ಸ್ಕೂಟರ್ನಲ್ಲಿ ಮುಡಿಪು ಕಡೆಗೆ ತೆರಳಿದ್ದು, ಪಿಕಪ್ ಚಾಲಕ ಅವರನ್ನು ಹಿಂಬಾಲಿಸಿಕೊಂಡು ಹೋದನೆಂದು ಸ್ಥಳೀಯರಿಂದ ಮಾಹಿತಿ ದೊರೆತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೆಟ್ರೋಲ್ ಪಂಪ್ ಬಳಿ ಡಿಕ್ಕಿ
ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಪಿಕಪ್ ವಾಹನವು ಸ್ಕೂಟರ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ ಎಂದು ಝುನೈದ್ ತಂದೆ ಆರೋಪಿಸಿದ್ದಾರೆ. ಡಿಕ್ಕಿಯ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.
ಸಂಜೆ ಸುಮಾರು 5 ಗಂಟೆಗೆ ಸಹೋದ್ಯೋಗಿ ಕೆ.ವಿ. ಅಬ್ಬಾಸ್ ಅವರು ಕರೆ ಮಾಡಿ ಅಪಘಾತದ ಬಗ್ಗೆ ಝುನೈದ್ ತಂದೆಗೆ ಮಾಹಿತಿ ನೀಡಿದ್ದರು. ಬಳಿಕ ತಂದೆ ಕಣಚೂರು ಆಸ್ಪತ್ರೆಗೆ ತೆರಳಿದಾಗ ಝುನೈದ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದರು. ಸಂಜೆ 6.55ಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಫ್ರಾಝ್ ಅವರನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರೂ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಎರಡೂ ವಾಹನಗಳಿಗೆ ಹಾನಿ, ವಿದ್ಯುತ್ ಕಂಬ ತುಂಡು
ಘಟನಾ ಸ್ಥಳಕ್ಕೆ ತೆರಳಿದಾಗ ಸ್ಕೂಟರ್ ಸಂಖ್ಯೆ KA19-HX-6964 ಜಖಂಗೊಂಡ ಸ್ಥಿತಿಯಲ್ಲಿ ಬಿದ್ದಿತ್ತು. ಪಿಕಪ್ ವಾಹನ ಸಂಖ್ಯೆ KA19B6747ರ ಮುಂಭಾಗದ ಬಂಪರ್ ಮತ್ತು ಮಡ್ಗಾರ್ಡ್ ಹಾನಿಗೊಂಡಿದ್ದವು. ಸಮೀಪದ ವಿದ್ಯುತ್ ಕಂಬವೂ ತುಂಡಾಗಿ ಬಿದ್ದಿರುವುದು ಕಂಡುಬಂದಿತ್ತು ಎಂದು ದೂರುದಾರರು ತಿಳಿಸಿದ್ದಾರೆ.
ಪಿಕಪ್ ಚಾಲಕನ ವಿರುದ್ಧ ಕೊಲೆ ಆರೋಪ
ಪಿಕಪ್ ಚಾಲಕ ಹಫೀಜ್ ಅಲಿಯಾಸ್ ಅಪ್ಪಿ ಉದ್ದೇಶಪೂರ್ವಕವಾಗಿ ಸ್ಕೂಟರ್ಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣನಾಗಿದ್ದಾನೆ ಎಂದು ಝುನೈದ್ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ. ಅಪಘಾತದ ಬಳಿಕ ಚಾಲಕ ಪಿಕಪ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಆದರೆ ಇದೀಗ ಪೊಲೀಸರು ಚಾಲಕನ ವಿರುದ್ಧ dooru ದಾಖಳಿಸಿದ್ದಾರೆ. ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿದ ಬಳಿಕ ಝುನೈದ್ ತಂದೆ ಠಾಣೆಗೆ ತೆರಳಿ ದೂರು ನೀಡಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

