ರಾಯ್ಪುರ : ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ತಂಡ ಭಾರತದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತು. ಜಿಂಬಾಬ್ವೆ ಪರ ಚಿಪೊ ಮುಗೆರಿ ತಿರಿಪಾನೊ 34 ರನ್ ಹಾಗೂ ನಾಯಕಿ ಜೋಸೆಫಿನ್ ಎನ್ಕೊಮೊ ಅಜೇಯ 27 ರನ್ ಗಳಿಸಿದರು.
ಶಫಾಲಿ ವರ್ಮಾ–ಸ್ಮೃತಿ ಮಂಧನಾ ಅಬ್ಬರ!
103 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ಕೇವಲ 8.5 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ ಮೊದಲ ವಿಕೆಟ್ಗೆ ಕೇವಲ 7.5 ಓವರ್ಗಳಲ್ಲಿ 96 ರನ್ಗಳ ಭರ್ಜರಿ ಜೊತೆಯಾಟವಾಡಿದರು.
ಶಫಾಲಿ ವರ್ಮಾ 25 ಎಸೆತಗಳಲ್ಲಿ 55 ರನ್ ಸಿಡಿಸಿದರೆ, ಸ್ಮೃತಿ ಮಂಧನಾ ಅಜೇಯ 47 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಫಾಲಿ ಅವರ ಸ್ಫೋಟಕ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ಗಳು ಸೇರಿದ್ದವು.
ಶಫಾಲಿ ವರ್ಮಾ ಹೆಸರಿಗೆ ದಾಖಲೆ!
ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಶಫಾಲಿ ವರ್ಮಾ, ಕ್ಯಾಲೆಂಡರ್ ವರ್ಷವೊಂದರಲ್ಲಿ 922 ರನ್ ಗಳಿಸಿದ ಸಾಧನೆ ಮಾಡಿದ್ದು, 50ಕ್ಕೂ ಹೆಚ್ಚು ರನ್ಗಳ 9 ಇನ್ನಿಂಗ್ಸ್ಗಳ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದರು.
ಇನ್ನು ಭಾರತದ ಪರ ನಿಕಿ ಪ್ರಸಾದ್ 2 ವಿಕೆಟ್ ಪಡೆದರೆ, ಕ್ರಾಂತಿ ಗೌಡ್, ನಂದಿನಿ ಶರ್ಮಾ, ದೀಪ್ತಿ ಶರ್ಮಾ ಹಾಗೂ ಶ್ರೀಚರಣಿ ತಲಾ ಒಂದು ವಿಕೆಟ್ ಕಬಳಿಸಿದರು.
ಸರಣಿಯ ಕೊನೆಯ ಪಂದ್ಯ ಮಂಗಳವಾರ ನಡೆಯಲಿದ್ದು, ಅದಕ್ಕೂ ಮುನ್ನವೇ ಭಾರತ ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿದೆ.

