ಮಂಗಳೂರು : ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾಗಿರುವ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026 ಅ.11ರಿಂದ 22ರವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದಿಂದ ನಡೆಯಲಿದೆ. ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಉತ್ಸವ ನಡೆಯಲಿದ್ದು, ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ.

ಈ ಬಾರಿ ಕ್ಷೇತ್ರವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಭವ್ಯ ದರ್ಬಾರ್ ಹಾಲ್ನಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ನಯನಮನೋಹರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ ನಡೆಯಲಿದೆ. ಭಜನೆ, ನೃತ್ಯ, ಸಂಗೀತ, ಕ್ರೀಡಾಕೂಟಗಳು ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳು ಉತ್ಸವದ ಮೆರುಗು ಹೆಚ್ಚಿಸಲಿವೆ.
ಅ.12ರಂದು ಮುಖ್ಯಮಂತ್ರಿಗಳಿಂದ ಚಾಲನೆ.
ಅ.11ರಂದು ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. ಅ.12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರು ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಿದ್ದಾರೆ. ಕರ್ನಾಟಕದ ವಿವಿಧ ಇಲಾಖೆಗಳ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅ.21ರಂದು ಸಂಜೆ 4 ಗಂಟೆಗೆ ಐತಿಹಾಸಿಕ ಮಂಗಳೂರು ದಸರಾ ಶೋಭಾಯಾತ್ರೆಗೆ ಚಾಲನೆ ದೊರೆಯಲಿದೆ.
ಪ್ರತಿದಿನ ಚಂಡಿಕಾಹೋಮ.
ಅ.12ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 8.30ಕ್ಕೆ ಶ್ರೀಕ್ಷೇತ್ರದಲ್ಲಿ ಚಂಡಿಕಾಹೋಮ ನಡೆಯಲಿದೆ. ಅ.17ರಂದು ಸಾಮೂಹಿಕ ವಿಶೇಷ ಚಂಡಿಕಾಹೋಮ ಆಯೋಜಿಸಲಾಗಿದ್ದು, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಸಾರ್ವಜನಿಕರಿಗೂ ಚಂಡಿಕಾಹೋಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
‘ದಸರಾ ಕಲಾಝೇಂಕಾರ’ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಅ.11ರಿಂದ 20ರವರೆಗೆ ಪ್ರತಿದಿನ ಮಧ್ಯಾಹ್ನ 2.30ರಿಂದ ರಾತ್ರಿ 11.30ರವರೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಇದೇ ವೇದಿಕೆಯಲ್ಲಿ ಪ್ರತಿದಿನ ಸಮಾಜದ ಸಾಧಕ ಮಹಿಳೆಯರನ್ನು ‘ಅಸಾಮಾನ್ಯ ಸ್ತ್ರೀ’ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಕವಿಗೋಷ್ಠಿ, ನೃತ್ಯ ಹಾಗೂ ವಿವಿಧ ಸ್ಪರ್ಧೆಗಳು
ಅ.12ರಂದು ರಾಜ್ಯಮಟ್ಟದ ದಸರಾ ಕವಿಗೋಷ್ಠಿ, ಕಥೆ ಹಾಗೂ ಕವನ ಸ್ಪರ್ಧೆಗಳು ನಡೆಯಲಿವೆ. ಅ.13ರಂದು ಸಂಜೆ 7.30ರಿಂದ ‘ರುದ್ರತಾಂಡವಮ್’ ರಾಜ್ಯಮಟ್ಟದ ಭಕ್ತಿಪ್ರಧಾನ ಸಮೂಹ ನೃತ್ಯ ಸ್ಪರ್ಧೆ ಸೀಸನ್-2 ಆಯೋಜಿಸಲಾಗಿದೆ.
ಅ.15ರಂದು ಮಕ್ಕಳಿಗಾಗಿ ‘ಮಕ್ಕಳ ದಸರಾ’ ನಡೆಯಲಿದ್ದು, ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಭಕ್ತಿಗೀತೆ, ಚಿತ್ರಕಲೆ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಗಳು ನಡೆಯಲಿವೆ. ಅ.16ರಂದು ‘ಮುದ್ದು ಶಾರದೆ’ ಸ್ಪರ್ಧೆ, ಅ.18ರಂದು ದಸರಾ ಮ್ಯಾರಥಾನ್ ಎಡಿಷನ್-4 ಹಾಗೂ ‘ಕಿನ್ನಿಪಿಲಿ’ ಸೀಸನ್-2 ನಡೆಯಲಿದೆ.
ಅ.19ರಂದು ಮಹಿಳೆಯರಿಗಾಗಿ ‘ಮಹಿಳಾ ದಸರಾ’ ಆಯೋಜಿಸಲಾಗಿದ್ದು, ಭರತನಾಟ್ಯ, ಬೆಂಕಿ ರಹಿತ ಅಡುಗೆ, ರಂಗೋಲಿ, ಮೆಹಂದಿ, ಸಮೂಹ ಗಾಯನ ಹಾಗೂ ಹೂ ಕಟ್ಟುವ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮಹಿಳೆಯರಿಂದ ಸಮೂಹ ಗರ್ಭಾ-ದಾಂಡಿಯಾ ನೃತ್ಯವೂ ನಡೆಯಲಿದೆ.
ಅ.20ರಂದು ‘ದಸರಾ ರಂಗಾಂತರಂಗ’ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಶಾರದಾ ಮಾತೆಯ ಮಡಿಲಲ್ಲಿ ಅಕ್ಷರಾಭ್ಯಾಸ.
ಅ.20ರಂದು ಬೆಳಗ್ಗೆ 9 ಗಂಟೆಗೆ ಶಾರದಾ ಮಾತೆಯ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.
ಅರಮನೆ ಶೈಲಿಯ ದರ್ಬಾರ್ ಮಂಟಪ
ಈ ಬಾರಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿರುವ ದರ್ಬಾರ್ ಮಂಟಪವನ್ನು ಅರಮನೆ ಶೈಲಿಯಲ್ಲಿ ಮನಮೋಹಕವಾಗಿ ವಿನ್ಯಾಸಗೊಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಜಯರಾಮ್ ಸೋಮಸುಂದರ್, ಹರಿಕೃಷ್ಣ ಬಂಟ್ವಾಳ, ಲೀಲಾಕ್ಷ ಕರ್ಕೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

