ಉಡುಪಿ : ಉಡುಪಿ–ಮೂಡುಬೆಳ್ಳೆ ಮಾರ್ಗದಲ್ಲಿ ಸಂಚರಿಸುವ ‘ಶ್ರೀ ಕೃಷ್ಣಪ್ರಸಾದ್’ ಸಿಟಿ ಬಸ್‌ವೊಂದು ದೆಂದೂರುಕಟ್ಟೆಯ ಎಂಆರ್‌ಪಿಎಲ್ ಪೆಟ್ರೋಲ್ ಪಂಪ್ ಬಳಿ ಶುಕ್ರವಾರ ಬೆಳಗಿನ ಜಾವ ಬೆಂಕಿಗಾಹುತಿಯಾಗಿದೆ.

ಪ್ರತಿದಿನದಂತೆ ಬುಧವಾರ ರಾತ್ರಿ ಬಸ್‌ನ್ನು ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಬೆಂಕಿಯ ತೀವ್ರತೆಯಿಂದ ಸಮೀಪದಲ್ಲಿದ್ದ ಟೆಂಪೊವೊಂದಕ್ಕೂ ಬೆಂಕಿ ವ್ಯಾಪಿಸಿದ್ದು, ಸೆಕ್ಯುರಿಟಿ ಗಾರ್ಡ್ ಹಾಗೂ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ಪೆಟ್ರೋಲ್ ಪಂಪ್‌ನಲ್ಲಿ ಮತ್ತೊಂದು ಬಸ್ ನಿಲ್ಲಿಸಲಾಗಿದ್ದರೂ ಅದಕ್ಕೆ ಯಾವುದೇ ಹಾನಿಯಾಗಿಲ್ಲ.
ಅದೃಷ್ಟವಶಾತ್ ಬೆಂಕಿ ಪೆಟ್ರೋಲ್ ಪಂಪ್‌ಗೆ ವ್ಯಾಪಿಸದೆ ನಿಯಂತ್ರಣಕ್ಕೆ ಬಂದಿದ್ದು, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಘಟನೆಯಿಂದ ₹10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬಸ್‌ಗೆ ಬೆಂಕಿ ತಗುಲಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ನಡೆಯಬೇಕಿದೆ.

