ಮೈಸೂರು :ಟಿ. ನರಸೀಪುರದಲ್ಲಿ ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಎರಡು ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿದ ಪ್ರತಾಪ್ ಸಿಂಹ, “ಪ್ರಚೋದನೆ ನೀಡಿದ್ದು ಇನ್ಸ್ಪೆಕ್ಟರ್, ಆದರೆ ನನ್ನ ಮೇಲೆ ಎಫ್ಐಆರ್ ಹಾಕಲಾಗಿದೆ. ಅಟ್ರಾಸಿಟಿ ಕೇಸ್ ಹಾಕಿದ್ದಾರೆ. ನಾನು ಸಂವಿಧಾನದ ಅಡಿಯಲ್ಲೇ ಮಾತನಾಡುತ್ತೇನೆ, ಕಾನೂನಾತ್ಮಕವಾಗಿಯೇ ನಡೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಟಿ. ನರಸೀಪುರದ ಗಣೇಶ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಈ ಹಿಂದೆ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಪ್ರಚೋದನಕಾರಿ ಭಾಷಣ, ಸಾರ್ವಜನಿಕ ಶಾಂತಿಗೆ ಧಕ್ಕೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳಡಿ ಪ್ರಕರಣ ದಾಖಲಾಗಿತ್ತು.
‘ಅಟ್ರಾಸಿಟಿ ಕೇಸ್ ಹಾಕುವಂತಹದ್ದೇನು ಮಾತನಾಡಿದ್ದೇನೆ?’
ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿದ ಅವರು, “ಅಟ್ರಾಸಿಟಿ ಕೇಸ್ ಹಾಕುವಂತಹದ್ದನ್ನು ನಾನು ಏನು ಮಾತನಾಡಿದ್ದೇನೆ? ನೀಲಿ ಶಾಲು ಹಾಕಿಕೊಂಡು ನಮ್ಮ ವಿರುದ್ಧ ಮಾತನಾಡುತ್ತೀರಾ ಎಂದು ಹೇಳಿದ್ದೇನೆ” ಎಂದು ಹೇಳಿದ್ದಾರೆ.
ದಲಿತ ಸಂಘಟನೆಗಳ ವಿರುದ್ಧವೂ ಹಲವು ಪ್ರಶ್ನೆಗಳನ್ನು ಎತ್ತಿದ ಅವರು, ಸಾಮರಸ್ಯ ಯಾತ್ರೆ ನಡೆಸಿದವರು ತಮ್ಮ ವಿರುದ್ಧ ಧಿಕ್ಕಾರ ಕೂಗಿದ್ದೇ ಸಾಮರಸ್ಯವೇ ಎಂದು ಪ್ರಶ್ನಿಸಿದರು. “ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳದ ನಿಮಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅನ್ಯಾಯ ಆದ ಜಾಗದಲ್ಲಿ ಧ್ವನಿ ಎತ್ತಿ, ಒಳ್ಳೆಯ ವಿಚಾರಕ್ಕೆ ಧ್ವನಿ ಎತ್ತಿ. ಆಗ ನಾವು ಕೂಡ ನಿಮ್ಮ ಜೊತೆ ನಿಲ್ಲುತ್ತೇವೆ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
‘ಅಂಬೇಡ್ಕರ್ ನಮಗೆ ಮಾತ್ರ ಸೇರಿಲ್ಲ’.
ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ತಮ್ಮ ಗೌರವವನ್ನು ಪ್ರಸ್ತಾಪಿಸಿದ ಪ್ರತಾಪ್ ಸಿಂಹ, “ಅಂಬೇಡ್ಕರ್ ನಿಮಗೆ ಮಾತ್ರ ಸೇರಿಲ್ಲ, ನಮಗೂ ಸೇರಿದವರು. ನಾನು ನೀಲಿ ಶಾಲನ್ನು ಗೌರವಿಸುತ್ತೇನೆ. ನಾನು ಅದರ ವಿರುದ್ಧ ಇಲ್ಲ” ಎಂದು ಹೇಳಿದ್ದಾರೆ.
ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ತಾನು ಹಿಂದೆಯೂ ಬರೆದಿದ್ದೇನೆ ಎಂದು ಹೇಳಿದ ಅವರು, “ನಾನು ದಲಿತ ವಿರೋಧಿ ಅಲ್ಲ. ಸುಮ್ಮನೆ ವಿಷಯಾಂತರ ಮಾಡಬೇಡಿ. ನನ್ನ ನಿಲುವು ಏನು ಅನ್ನೋದನ್ನು ಸ್ಪಷ್ಟವಾಗಿ ಹೇಳಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸೆ.23ರಂದು ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿರುವ ಬಗ್ಗೆ ವರದಿಗಳಿದ್ದು, ಪೊಲೀಸ್ ಅಧಿಕಾರಿಗೆ ಜಾತಿ ನಿಂದನೆ ಮಾಡಿದ ಆರೋಪದ ಆಧಾರದ ಮೇಲೆ ದೂರು ದಾಖಲಾಗಿದೆ ಎಂದು ವರದಿಯಾಗಿದೆ.

