ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ಸೆಪ್ಟೆಂಬರ್ 18ರಂದು ಮಂಗಳೂರಿನ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾಸೌಧ’ದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆಯ ಸಚಿವರು ಸೆ.17ರ ಸಂಜೆ ನಗರಕ್ಕೆ ಆಗಮಿಸಲಿದ್ದು, ಸೆ.18ರಂದು ಬೆಳಗ್ಗೆ ಮುಖ್ಯರಸ್ತೆಗಳ ಮೂಲಕ ಪ್ರಜಾಸೌಧಕ್ಕೆ ತೆರಳಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮೇರಿಹಿಲ್‌ನ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ, ನಂತರ ಮಂಗಳೂರಿಗೆ ವಾಪಸಾಗಿ ತಂಗಲಿದ್ದಾರೆ. ಸೆ.19ರ ಬೆಳಗ್ಗೆ ನಿರ್ಗಮಿಸಲಿದ್ದಾರೆ.
ಗಣ್ಯರ ಸಂಚಾರದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಗಣ್ಯರ ಸಂಚಾರ ಇರುವ ಪ್ರಮುಖ ಮಾರ್ಗಗಳು.
ಸೆ.17ರ ಸಂಜೆ ಹಾಗೂ ಸೆ.19ರ ಬೆಳಗ್ಗೆ : ಬಜಪೆ ವಿಮಾನ ನಿಲ್ದಾಣ – ಕಾವೂರು – ಬೋಂದೆಲ್ – ಮೇರಿಹಿಲ್ – ಕೆ.ಪಿ.ಟಿ. – ಕದ್ರಿ ಕಂಬಳ – ಬಂಟ್ಸ್ ಹಾಸ್ಟೆಲ್ – ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್ – ಹಂಪನಕಟ್ಟ – ಕ್ಲಾಕ್ ಟವರ್ – ಹ್ಯಾಮಿಲ್ಟನ್ ಜಂಕ್ಷನ್.
ಸೆ.18ರ ಬೆಳಗ್ಗೆ : ಹ್ಯಾಮಿಲ್ಟನ್ ಜಂಕ್ಷನ್ – ಕ್ಲಾಕ್ ಟವರ್ – ಹಂಪನಕಟ್ಟ – ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್ – ಕೆ.ಪಿ.ಟಿ. ಜಂಕ್ಷನ್ – ನಂತೂರು ವೃತ್ತ – ಪಂಪುವೆಲ್ – ನಾಗುರಿ – ಬಜಾಲ್ ಕ್ರಾಸ್ – ಪ್ರಜಾಸೌಧ – ಪಡೀಲ್ ಜಂಕ್ಷನ್.
ರಸ್ತೆಬದಿಯಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಗಣ್ಯರ ಸಂಚಾರ ಇರುವ ಮೇಲ್ಕಂಡ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ. ಆಂಬ್ಯುಲೆನ್ಸ್ ಹಾಗೂ ಇತರ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಸೂಚಿಸಿರುವ ಪರ್ಯಾಯ ಮಾರ್ಗಗಳು.
ಬದ್ರಿಯಾ ಜಂಕ್ಷನ್–ಹ್ಯಾಮಿಲ್ಟನ್ ಜಂಕ್ಷನ್ : ಬದ್ರಿಯಾ ಜಂಕ್ಷನ್‌ನಿಂದ ತಾಜ್ ವಿವಾಂಟಾ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ನಿಲೇಶ್ವರ ರಸ್ತೆ–ರೋಸಾರಿಯೋ ರಸ್ತೆ ಮೂಲಕ ಸಂಚರಿಸಬೇಕು.
ಹ್ಯಾಮಿಲ್ಟನ್ ಜಂಕ್ಷನ್–ಬದ್ರಿಯಾ ಜಂಕ್ಷನ್:
ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಬದ್ರಿಯಾ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸಲು ಸೂಚಿಸಲಾಗಿದೆ.
ಪಂಪುವೆಲ್–ಪಡೀಲ್:
ಪಂಪುವೆಲ್‌ನಿಂದ ನಾಗುರಿ ಮೂಲಕ ಪಡೀಲ್ ಕಡೆಗೆ ಅಥವಾ ಪಡೀಲ್‌ನಿಂದ ಪಂಪುವೆಲ್ ಕಡೆಗೆ ತೆರಳುವ ವಾಹನಗಳು ನಂತೂರು ವೃತ್ತ–ಕೈಕಂಬ–ಮರೋಳಿ ಮಾರ್ಗ ಬಳಸಬಹುದು.
ಪರ್ಯಾಯವಾಗಿ ತೊಕ್ಕೊಟ್ಟು–ದೇರಳಕಟ್ಟೆ–ಮುಡಿಪು–ಬೊಳ್ಯಾರ್–ಮೆಲ್ಕಾರ್ ಮಾರ್ಗವನ್ನೂ ಬಳಸಬಹುದು.
ಬಜಾಲ್ ಕ್ರಾಸ್–ಬಜಾಲ್/ಕಂಕನಾಡಿ:
ಬಜಾಲ್ ಕ್ರಾಸ್ (ಪ್ರಜಾಸೌಧ) ಭಾಗದಿಂದ ಬಜಾಲ್ ಅಥವಾ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣದ ಕಡೆಗೆ ಸಂಚರಿಸುವ ವಾಹನಗಳು NH-66 ಮೂಲಕ ಜಪ್ಪಿನಮೊಗರು ದ್ವಾರ–ಬಜಾಲ್ ಮಾರ್ಗ ಬಳಸಬೇಕು.
ತೊಕ್ಕೊಟ್ಟು–ಪಂಪುವೆಲ್:
ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ತೆರಳುವ ವಾಹನಗಳು ಮಹಾಕಾಳಿಪಡ್ಪು–ಮಂಗಳಾದೇವಿ ಮಾರ್ಗವಾಗಿ ನಗರ ಪ್ರವೇಶಿಸಬೇಕು.
ಸಾರ್ವಜನಿಕರಿಗೆ ಪೊಲೀಸ್ ಮನವಿ.
ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಲು ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ಪೊಲೀಸರೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

