ಮಂಗಳೂರು : ದಕ್ಷಿಣ ಕನ್ನಡ ಕೇಟರಿಂಗ್ ಮಾಲಕರ ಸಂಘ (ರಿ.), ಮಂಗಳೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಗ್ರಾಂಡ್ ಸಭಾಭವನದಲ್ಲಿ ನಡೆಯಿತು.

ಶಶಿಧರ್ ಶೆಟ್ಟಿ ಬರೋಡ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ನಿಕಟಪೂರ್ವ ಅಧ್ಯಕ್ಷರಿಂದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಿತು. ಹರೀಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಹಾಗೂ ಸಂತೋಷ್ ಮೆನೆಜಸ್ ಅವರು ನೂತನ ಪದಾಧಿಕಾರಿಗಳಾಗಿ ಪದಗ್ರಹಣ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿಧರ್ ಶೆಟ್ಟಿ ಬರೋಡ, ಕೇಟರಿಂಗ್ ಉದ್ಯಮವು ಕೇವಲ ಆಹಾರ ಪೂರೈಕೆಯ ಕ್ಷೇತ್ರವಲ್ಲ ; ಅನೇಕ ಕುಟುಂಬಗಳಿಗೆ ಜೀವನೋಪಾಯ ಕಲ್ಪಿಸುವ ಪ್ರಮುಖ ಉದ್ಯಮವಾಗಿದೆ ಎಂದರು. ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ಬದುಕಿಗೆ ದಾರಿ ತೋರಿಸುವ ಕ್ಷೇತ್ರವೂ ಇದಾಗಿದೆ ಎಂದು ಹೇಳಿದರು. ಕೇಟರಿಂಗ್ ಉದ್ಯಮದಲ್ಲಿ ಪರಿಶ್ರಮ ಮತ್ತು ಶ್ರದ್ಧೆ ಅತ್ಯಂತ ಮುಖ್ಯ. ತಾವು ಪೋಸ್ಟ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೇಟರಿಂಗ್ ಉದ್ಯಮಕ್ಕೆ ಕಾಲಿಟ್ಟಿದ್ದು, ಆರಂಭದಲ್ಲಿ ದಿನಕ್ಕೆ ಸುಮಾರು 100 ಮಂದಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದವರು ಇಂದು ಸುಮಾರು 8 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುವ ಮಟ್ಟಕ್ಕೆ ಬೆಳೆದಿರುವುದಾಗಿ ತಮ್ಮ ಅನುಭವ ಹಂಚಿಕೊಂಡರು. ಮಂಗಳೂರಿನ ಬೀಚ್ಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದ್ದು, ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ ಕೇಟರಿಂಗ್ ಉದ್ಯಮಕ್ಕೂ ಉತ್ತಮ ಬೇಡಿಕೆ ಸೃಷ್ಟಿಯಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಚಂದ್ರಹಾಸ್ ಶೆಟ್ಟಿ ರಂಗೋಲಿ ಮಾತನಾಡಿ, ಯಾವುದೇ ಸಮಾರಂಭ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಯುವಲ್ಲಿ ಕೇಟರಿಂಗ್ ಮಾಲಕರ ಪಾತ್ರ ಮಹತ್ವದ್ದಾಗಿದೆ. ಅತಿಥಿಗಳಿಗೆ ಉತ್ತಮ ಊಟೋಪಚಾರ ನೀಡುವುದು ಸಮಾರಂಭದ ಯಶಸ್ಸಿನ ಪ್ರಮುಖ ಭಾಗವಾಗಿದೆ. ಕೇಟರಿಂಗ್ ಉದ್ಯಮಿಗಳು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘ ಮತ್ತಷ್ಟು ಬಲಿಷ್ಠವಾಗಲಿ ಎಂದು ಆಶಿಸಿದರು.
ನಾಲ್ವರಿಗೆ ಸನ್ಮಾನ : ಕಳೆದ 40 ವರ್ಷಗಳಿಂದ ಕೇಟರಿಂಗ್ ಉದ್ಯಮದಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸಿದ ಚಿಕ್ಕಯ್ಯ ಪೂಜಾರಿ, ಇಬ್ರಾಹಿಂ ಮೋನು ಹಾಗೂ ಲೀನಾ ಲೋಬೊ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪೂಜಾ ಕೇಟರಿಂಗ್ ಮಾಲಕ ಜಯಕೃಷ್ಣ ಕೋಟ್ಯಾನ್ ಅವರನ್ನೂ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭೋಜರಾಜ್ ವಾಮಂಜೂರು, ವಾಲ್ಟರ್ ನಂದಳಿಕೆ, ವೇಣುಗೋಪಾಲ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ರಂಗೋಲಿ, ಗೌರವಾಧ್ಯಕ್ಷ ಸುಧಾಕರ್ ಕಾಮತ್, ಸಂತೋಷ್ ಡಿಸೋಜಾ, ರಾಜೇಶ್ ಕೆ., ಚೆನ್ನಪ್ಪ ಕುಲಾಲ್, ಸ್ಥಾಪಕ ಸಲಹೆಗಾರರಾದ ವಿಜಯ್ ಕುಮಾರ್ ಎಸ್.ಆರ್., ಪ್ರಸಾದ್ ಅಂಚನ್, ಯಶವಂತ್ ಪೂಜಾರಿ ಹಾಗೂ ಬಾಲಕೃಷ್ಣ ಕುಕ್ಯನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

