ಮಂಗಳೂರು : ಅಡಿಕೆ ಮಾರುಕಟ್ಟೆಯ ಏರಿಳಿತ ಹಾಗೂ ಕೊಕ್ಕೊ ವಲಯದಲ್ಲಿನ ಸವಾಲುಗಳ ನಡುವೆಯೂ ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೊ ಮಾರ್ಕೆಟಿಂಗ್ ಅಂಡ್ ಪ್ರೊಸೆಸ್ಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ) 2025-26ನೇ ಆರ್ಥಿಕ ವರ್ಷದಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ. ಕ್ಯಾಂಪ್ಕೊ ₹3,735 ಕೋಟಿ ಒಟ್ಟು ವ್ಯವಹಾರ ವಹಿವಾಟು ಹಾಗೂ ₹49.62 ಕೋಟಿ ತೆರಿಗೆಪೂರ್ವ ಲಾಭ ದಾಖಲಿಸಿದೆ. ಸಂಸ್ಥೆಯ ಆರ್ಥಿಕ ಸದೃಢತೆ ಹಾಗೂ ಬೆಳೆಗಾರ-ಸದಸ್ಯರ ಮೇಲಿನ ಬದ್ಧತೆಯ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.14ರಷ್ಟು ಡಿವಿಡೆಂಡ್ ನೀಡಲು ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ ಎಂದು ಅಧ್ಯಕ್ಷರಾದ ಸತೀಶ್ ಚಂದ್ರ ರವರು ತಿಳಿಸಿದ್ದಾರೆ.
ಅಡಿಕೆಯೇ ಕ್ಯಾಂಪ್ಕೊದ ವಹಿವಾಟಿನ ಬೆನ್ನೆಲುಬು 2025-26ರಲ್ಲಿ ಕ್ಯಾಂಪ್ಕೊ ₹2,924.32 ಕೋಟಿ ಮೌಲ್ಯದ 58,742.76 ಮೆಟ್ರಿಕ್ ಟನ್ ಅಡಿಕೆಯನ್ನು ಖರೀದಿಸಿದೆ. ಇದರಲ್ಲಿ ₹1,362.13 ಕೋಟಿ ಮೌಲ್ಯದ 24,052.07 ಮೆಟ್ರಿಕ್ ಟನ್ ಕೆಂಪಡಿಕೆ ಹಾಗೂ ₹1,562.19 ಕೋಟಿ ಮೌಲ್ಯದ 34,690.69 ಮೆಟ್ರಿಕ್ ಟನ್ ಬಿಳಿ ಅಡಿಕೆ ಸೇರಿದೆ. ಇದೇ ಅವಧಿಯಲ್ಲಿ ₹2,985.19 ಕೋಟಿ ಮೌಲ್ಯದ 59,088.64 ಮೆಟ್ರಿಕ್ ಟನ್ ಅಡಿಕೆಯನ್ನು ಮಾರಾಟ ಮಾಡಲಾಗಿದೆ. ವ್ಯಾಪಕ ಖರೀದಿ ಜಾಲ ಹಾಗೂ ಮಾರುಕಟ್ಟೆ ಮಧ್ಯಪ್ರವೇಶದ ಮೂಲಕ ಬೆಳೆಗಾರರಿಗೆ ಖಾತರಿಯ ಮಾರಾಟ ವೇದಿಕೆ ಒದಗಿಸುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದ್ದಾರೆ.
ಆಮದು ಅಡಿಕೆ ಬಗ್ಗೆ ಕಳವಳ : ದೇಶೀಯ ಮಾರುಕಟ್ಟೆಗೆ ಹೆಚ್ಚುತ್ತಿರುವ ಆಮದು ಅಡಿಕೆಯ ಒಳಹರಿವಿನಿಂದ ಭಾರತೀಯ ಅಡಿಕೆ ಬೆಳೆಗಾರರು ಹಾಗೂ ಸಂಘಟಿತ ಮಾರಾಟ ಸಂಸ್ಥೆಗಳು ಸಂಕಷ್ಟ ಎದುರಿಸುತ್ತಿವೆ ಎಂದು ಕ್ಯಾಂಪ್ಕೊ ಕಳವಳ ವ್ಯಕ್ತಪಡಿಸಿದೆ. ಆಮದು ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ದೇಶೀಯ ಉತ್ಪನ್ನವೆಂದು ಮಾರಾಟ ಮಾಡುವ ಸಾಧ್ಯತೆ ಮಾರುಕಟ್ಟೆಯ ಪಾರದರ್ಶಕತೆ ಮತ್ತು ಬೆಲೆ ನಿರ್ಧಾರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಂಸ್ಥೆ ಹೇಳಿದೆ.
ಅಡಿಕೆ ಆಮದಿನ ಮೇಲೆ ಕಟ್ಟುನಿಟ್ಟಿನ ನಿಗಾ, ತಪ್ಪು ವರ್ಗೀಕರಣಕ್ಕೆ ತಡೆ ಹಾಗೂ ಆಮದು ಅಡಿಕೆಯನ್ನು ದೇಶೀಯ ಉತ್ಪನ್ನದೊಂದಿಗೆ ಬೆರೆಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಈ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಂಡಿ ತೆರಿಗೆ ವಿಚಾರ. : ಉತ್ತರ ಪ್ರದೇಶದಲ್ಲಿ ಅಡಿಕೆ ವಹಿವಾಟಿನ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯಿಂದ ಅಂತರರಾಜ್ಯ ಮಾರಾಟದ ವೆಚ್ಚ ಹೆಚ್ಚುತ್ತಿದೆ ಎಂದು ಕ್ಯಾಂಪ್ಕೊ ತಿಳಿಸಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ವಿಷಯ ತರಲಾಗಿದ್ದು, ಉತ್ತರ ಪ್ರದೇಶ ಸರ್ಕಾರದೊಂದಿಗೂ ಚರ್ಚೆ ನಡೆಸಲಾಗಿದೆ. ಕೃಷಿ ಉತ್ಪನ್ನಗಳ ಅಂತರರಾಜ್ಯ ವಹಿವಾಟಿನಲ್ಲಿ ಅನಗತ್ಯ ತೆರಿಗೆ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಚರ್ಚೆ ಮುಂದುವರಿದಿದೆ.
ಕೊಕ್ಕೊ ಮತ್ತು ಚಾಕೊಲೇಟ್ ವಿಭಾಗದಲ್ಲೂ ಸಾಧನೆ 2025-26ರಲ್ಲಿ ಕ್ಯಾಂಪ್ಕೊ ₹27.96 ಕೋಟಿ ಮೌಲ್ಯದ 2,351.18 ಮೆಟ್ರಿಕ್ ಟನ್ ಹಸಿ ಕೊಕ್ಕೊ ಬೀಜ ಹಾಗೂ ₹185.52 ಕೋಟಿ ಮೌಲ್ಯದ 4,021.85 ಮೆಟ್ರಿಕ್ ಟನ್ ಒಣ ಕೊಕ್ಕೊ ಬೀಜ ಖರೀದಿಸಿದೆ.
ಚಾಕೊಲೇಟ್ ಕಾರ್ಖಾನೆಯಲ್ಲಿ ಒಟ್ಟು 12,606.40 ಮೆಟ್ರಿಕ್ ಟನ್ ಉತ್ಪಾದನೆ ನಡೆದಿದೆ. ಕೊಕ್ಕೊ ಮತ್ತು ಚಾಕೊಲೇಟ್ ಉತ್ಪನ್ನಗಳಿಂದ ₹488.65 ಕೋಟಿ ಮೌಲ್ಯದ ಮಾರಾಟ ದಾಖಲಾಗಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕ್ಯಾಂಪ್ಕೊದ ಪ್ರೀಮಿಯಂ ಚಾಕೊಲೇಟ್ ಉತ್ಪನ್ನಗಳು ಲಭ್ಯವಾಗಿದ್ದು, ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ವಿಸ್ತರಣೆಗೆ ಒತ್ತು ನೀಡಲಾಗಿದೆ.
ರಬ್ಬರ್, ಕಾಳುಮೆಣಸು ವಹಿವಾಟು ಕ್ಯಾಂಪ್ಕೊ ₹32.41 ಕೋಟಿ ಮೌಲ್ಯದ 1,704.77 ಮೆಟ್ರಿಕ್ ಟನ್ ರಬ್ಬರ್ ಖರೀದಿಸಿ ₹33.67 ಕೋಟಿ ಮೌಲ್ಯದ 1,728.38 ಮೆಟ್ರಿಕ್ ಟನ್ ಮಾರಾಟ ಮಾಡಿದೆ. ಕಾಳುಮೆಣಸಿನಲ್ಲಿ ₹113.22 ಕೋಟಿ ಮೌಲ್ಯದ 1,656.12 ಮೆಟ್ರಿಕ್ ಟನ್ ಖರೀದಿ ಹಾಗೂ ₹134.27 ಕೋಟಿ ಮೌಲ್ಯದ 1,982.01 ಮೆಟ್ರಿಕ್ ಟನ್ ಮಾರಾಟ ನಡೆದಿದೆ. 1.16 ಲಕ್ಷಕ್ಕೂ ಹೆಚ್ಚು ಕೊಕ್ಕೊ ಸಸಿಗಳ ವಿತರಣೆ ಬೆಳೆಗಾರರಿಗೆ ಗುಣಮಟ್ಟದ ಕೊಕ್ಕೊ ಗಿಡಗಳನ್ನು ಒದಗಿಸುವ ಉದ್ದೇಶದಿಂದ 2025-26ರಲ್ಲಿ 1,16,275 ಕೊಕ್ಕೊ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. 2026-27ರಲ್ಲಿ ಮತ್ತೊಂದು 1 ಲಕ್ಷ ಕೊಕ್ಕೊ ಸಸಿಗಳನ್ನು ವಿತರಿಸಲು ಕ್ಯಾಂಪ್ಕೊ ಯೋಜಿಸಿದೆ.
ಸದಸ್ಯರ ಕಲ್ಯಾಣಕ್ಕೆ ₹86.42 ಲಕ್ಷ ನೆರವು ವಿವಿಧ ಸದಸ್ಯ ಸೌಲಭ್ಯ ಯೋಜನೆಗಳಡಿ 2025-26ರಲ್ಲಿ ಒಟ್ಟು 120 ಫಲಾನುಭವಿಗಳಿಗೆ ₹86.42 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಹೃದಯ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಕಸಿ, ಡಯಾಲಿಸಿಸ್, ಆಂಜಿಯೋಪ್ಲಾಸ್ಟಿ, ಅಪಘಾತ ಮರಣ, ಶಿಕ್ಷಣ ಹಾಗೂ ದೀರ್ಘಕಾಲದ ಆಸ್ಪತ್ರೆ ಚಿಕಿತ್ಸೆಗೆ ಈ ನೆರವು ನೀಡಲಾಗಿದೆ.
‘ಕ್ಯಾಂಪ್ಕೊ ಕಿಸಾನ್ ಮಿತ್ರ’ ಮೂಲಕ ಡಿಜಿಟಲ್ ಸೇವೆ
ಸದಸ್ಯರಿಗಾಗಿ ERP ವ್ಯವಸ್ಥೆಯೊಂದಿಗೆ ಸಂಯೋಜಿತ ‘ಕ್ಯಾಂಪ್ಕೊ ಕಿಸಾನ್ ಮಿತ್ರ’ ಮೊಬೈಲ್ ಆ್ಯಪ್ ಆರಂಭಿಸಲಾಗಿದೆ. ಸದಸ್ಯರು ತಮ್ಮ ಪ್ರೊಫೈಲ್, ಷೇರು ವಿವರ, ಡಿವಿಡೆಂಡ್, ಪ್ರೋತ್ಸಾಹಧನ, ಠೇವಣಿ, ಸಾಲ, ಮಾರುಕಟ್ಟೆ ದರ ಹಾಗೂ ಶಾಖೆಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಪಡೆಯಬಹುದಾಗಿದೆ.
ಇದರೊಂದಿಗೆ ‘ಕ್ಯಾಂಪ್ಕೊ ಕಾರ್ಟ್’ ಆನ್ಲೈನ್ ಶಾಪಿಂಗ್ ವೇದಿಕೆಯ ಮೂಲಕ ದೇಶದಾದ್ಯಂತ ಗ್ರಾಹಕರಿಗೆ ನೇರವಾಗಿ ಕ್ಯಾಂಪ್ಕೊ ಉತ್ಪನ್ನಗಳನ್ನು ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
ಖರೀದಿ ಕೇಂದ್ರಗಳು ಮತ್ತು ಮೂಲಸೌಕರ್ಯ ವಿಸ್ತರಣೆ
ರಿಪ್ಪನ್ಪೇಟೆ, ಚೇಳೂರು ಹಾಗೂ ಸರಪಾಡಿಯಲ್ಲಿ ಹೊಸ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಾತಮಂಗಲಂ ಹಾಗೂ ತಿಪಟೂರು ಶಾಖೆಗಳಲ್ಲೂ ಕಾರ್ಯಾರಂಭ ಮಾಡಲಾಗಿದೆ.
ಶಿವಮೊಗ್ಗದಲ್ಲಿ 1 ಲಕ್ಷ ಚೀಲ ಸಾಮರ್ಥ್ಯದ ಗೋದಾಮು, ಚನ್ನಗಿರಿಯಲ್ಲಿ ಗ್ರೇಡಿಂಗ್ ಹಾಲ್, ವಿಟ್ಲದಲ್ಲಿ ಕಚೇರಿ-ಗೋದಾಮು ಸಂಕೀರ್ಣ ಹಾಗೂ ತಮಿಳುನಾಡಿನ ಧಾರಾಪುರಂನಲ್ಲಿ ಕೊಕ್ಕೊ ದಾಸ್ತಾನು ಮತ್ತು ಒಣಗಿಸುವ ಸೌಲಭ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಗೆ ಒತ್ತು ಕ್ಯಾಂಪ್ಕೊ ‘ನ್ಯಾಷನಲ್ ಕೋ-ಆಪರೇಟಿವ್ ಎಕ್ಸ್ಪೋರ್ಟ್ಸ್ ಲಿಮಿಟೆಡ್’ (NCEL) ಸದಸ್ಯತ್ವ ಪಡೆದುಕೊಂಡಿದೆ. 130 ಮೆಟ್ರಿಕ್ ಟನ್ ಭಾರತೀಯ ಅಡಿಕೆಯನ್ನು ಮಾಲ್ಡೀವ್ಸ್ಗೆ ರಫ್ತು ಮಾಡಲಾಗಿದೆ. ಡ್ರಿಂಕಿಂಗ್ ಚಾಕೊಲೇಟ್ ಪುಡಿ ಹಾಗೂ ಕೈಗಾರಿಕಾ ಕೊಕ್ಕೊ ಉತ್ಪನ್ನಗಳನ್ನೂ ವಿದೇಶಿ ಮಾರುಕಟ್ಟೆಗೆ ರಫ್ತು ಮಾಡಲಾಗಿದೆ. ದುಬೈನಲ್ಲಿ ನಡೆದ ಗಲ್ಫ್ ಫುಡ್ ಫೆಸ್ಟಿವಲ್ನಲ್ಲೂ ಕ್ಯಾಂಪ್ಕೊ ಭಾಗವಹಿಸಿ ಅಂತಾರಾಷ್ಟ್ರೀಯ ವ್ಯವಹಾರ ಅವಕಾಶಗಳನ್ನು ಅನ್ವೇಷಿಸಿದೆ.
ಸಂಶೋಧನೆ ಮತ್ತು ಹಸಿರು ಇಂಧನಕ್ಕೆ ಆದ್ಯತೆ ಕರ್ನಾಟಕ ಮತ್ತು ಕೇರಳದ ಅಡಿಕೆ ಪರಿಸರ ವ್ಯವಸ್ಥೆಯ ಪುನಶ್ಚೇತನಕ್ಕಾಗಿ ಬಹುಶಿಸ್ತೀಯ ಸಂಶೋಧನಾ ಯೋಜನೆಯನ್ನು ಕ್ಯಾಂಪ್ಕೊ ಆರಂಭಿಸಿದೆ. ಅಡಿಕೆ ವಲಯ ಎದುರಿಸುತ್ತಿರುವ ರೋಗ, ಕೃಷಿ ಹಾಗೂ ಪರಿಸರ ಸವಾಲುಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ. ಚಾಕೊಲೇಟ್ ಕಾರ್ಖಾನೆಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನೂ ಹೆಚ್ಚಿಸಲಾಗುತ್ತಿದೆ. ಅಸ್ತಿತ್ವದಲ್ಲಿರುವ ಪವನ ವಿದ್ಯುತ್ ಘಟಕಗಳಿಂದ 2025-26ರಲ್ಲಿ 39.40 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ/ವೀಲಿಂಗ್ ಮಾಡಲಾಗಿದೆ. 1.53 ಲಕ್ಷಕ್ಕೂ ಹೆಚ್ಚು ಸದಸ್ಯರ ಬಲಿಷ್ಠ ನೆಲೆ 2026ರ ಮಾರ್ಚ್ 31ರ ವೇಳೆಗೆ ಕ್ಯಾಂಪ್ಕೊದ ಒಟ್ಟು ಸದಸ್ಯತ್ವ 1,53,794ಕ್ಕೆ ತಲುಪಿದೆ. ಸಂಸ್ಥೆಯ ಪಾವತಿಸಿದ ಷೇರು ಬಂಡವಾಳ ₹66.27 ಕೋಟಿಯಾಗಿದೆ.
CRISILನಿಂದ ದೀರ್ಘಾವಧಿ ಸಾಲಕ್ಕೆ ‘A (ಸ್ಥಿರ)’ ಹಾಗೂ ಅಲ್ಪಾವಧಿ ಸಾಲಕ್ಕೆ ‘A1’ ರೇಟಿಂಗ್ ಮುಂದುವರಿದಿದೆ.
2026-27ರಲ್ಲಿ ಮತ್ತಷ್ಟು ವಿಸ್ತರಣೆಯ ಗುರಿ ಮುಂದಿನ ಆರ್ಥಿಕ ವರ್ಷದಲ್ಲಿ ಅಡಿಕೆ ಖರೀದಿ ಮತ್ತು ಮಾರುಕಟ್ಟೆ ಬೆಂಬಲ ಬಲಪಡಿಸುವುದು, ಖರೀದಿ ಕೇಂದ್ರಗಳ ವಿಸ್ತರಣೆ, 1 ಲಕ್ಷ ಕೊಕ್ಕೊ ಸಸಿಗಳ ವಿತರಣೆ, ಚಾಕೊಲೇಟ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು, ದೇಶೀಯ-ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆ, ಡಿಜಿಟಲ್ ಸೇವೆಗಳ ಬಲವರ್ಧನೆ ಹಾಗೂ ರೈತಪರ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲು ಕ್ಯಾಂಪ್ಕೊ ಯೋಜಿಸಿದೆ. ರೈತರ ಹಿತರಕ್ಷಣೆ, ಕೃಷಿ ಉತ್ಪನ್ನಗಳಿಗೆ ಉತ್ತಮ ಮೌಲ್ಯ ಹಾಗೂ ಸದಸ್ಯರ ಸುಸ್ಥಿರ ಅಭಿವೃದ್ಧಿಯೇ ಸಂಸ್ಥೆಯ ಪ್ರಮುಖ ಗುರಿ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹಾಗೂ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯ್ಲಲಿ ಪದ್ಮರಾಜ್, ಪುರುಷೋತ್ತಮ್ ಭಟ್, ಗೋವಿಂದ ಭಟ್ ಹಾಗೂ ರೇಶ್ಮ ಮಲ್ಯ ರವರು ಉಪಸ್ಥಿತರಿದ್ದರು.

