ಮೂಡುಬಿದಿರೆ: ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೈವಸ್ಥಾನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ಮುಲ್ಕಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 70/2018, ಕಲಂ 454, 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಮೂಡುಬಿದಿರೆಯ ಮಾನ್ಯ ಹಿರಿಯ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ CC No.462/2023ರ ವಿಚಾರಣೆಯಲ್ಲಿತ್ತು. ಪ್ರಕರಣದ ಆರೋಪಿ ನಾಗರಾಜನ್ (38), ಸೆಲ್ವರಾಜ್ ಅವರ ಪುತ್ರ, ತಮಿಳುನಾಡಿನ ತಿರುಪ್ಪುರ ಜಿಲ್ಲೆಯ ತಿರುಪ್ಪುರ ಗ್ರಾಮದ ಶಾಸ್ತ್ರೀ ಸ್ಟ್ರೀಟ್ ನಿವಾಸಿಯಾಗಿದ್ದು, ಸುಮಾರು ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿಯ ವಿರುದ್ಧ ನ್ಯಾಯಾಲಯದಿಂದ ದಸ್ತಗಿರಿ ವಾರಂಟ್ ಹಾಗೂ ಪ್ರೋಕ್ಲಮೇಷನ್ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ತಮಿಳುನಾಡಿನ ತಿರುಪ್ಪುರದಲ್ಲಿ ನಾಗರಾಜನ್ನನ್ನು ಬಂಧಿಸಿ, ಇಂದು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

