ಬೀದರ್ : ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ಆರು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಮೊಗುಡಂಪಳ್ಳಿ ಮಂಡಲದ ಸತ್ವಾರ್ ಗ್ರಾಮದ ಹೊರವಲಯದಲ್ಲಿ ಟ್ಯಾಂಕರ್ ಲಾರಿ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ರಾಜಗೀರ ಗ್ರಾಮದ ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಆಟೋದಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ..
ಆರು ಮಂದಿ ಸಾವು ಅಪಘಾತದಲ್ಲಿ ರೇಖಾ, ಶ್ರೀದೇವಿ, ನಿಖಿತಾ, ಕವಿತಾ, ರೇಷ್ಮಾ ಹಾಗೂ ಆಟೋ ಚಾಲಕ ದೇವದಾಸ್ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಆರು ಮಂದಿಗೆ ಗಾಯ ಅಪಘಾತದಲ್ಲಿ ನಿರ್ಮಲಾ, ತುಳಜಮ್ಮಾ, ಚಂದ್ರಕಲಾ, ರಾಧಿಕಾ, ಶಿಲ್ಪಾ ಹಾಗೂ ಶೋಭಾ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸಂಗಾರೆಡ್ಡಿ ಹಾಗೂ ಬೀದರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ತುಳಜಮ್ಮಾ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ತೆಲಂಗಾಣ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಪಘಾತದ ನಿಖರ ಕಾರಣ ಹಾಗೂ ಲಾರಿ ಚಾಲಕನ ವಿರುದ್ಧದ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

