ಮಂಗಳೂರು : ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಕ್ಷೇತ್ರದ ತೊಕ್ಕೊಟ್ಟು ಬಳಿಯ ವಿನಮ್ರ ಬಾರ್‌ನಲ್ಲಿ ಶನಿವಾರ ತಡರಾತ್ರಿ ತಲವಾರು ಹಿಡಿದು ಭೀಕರ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ನಿವಾಸಿ ಆಸ್ಪಕ್ ಹಾಗೂ ಆಟೋ ಚಾಲಕ ಮತ್ತು ರೌಡಿಶೀಟರ್ ಮೊಹಮ್ಮದ್ ಶಾಕೀರ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ ಸುಮಾರು 12ರಿಂದ 12.20ರ ವೇಳೆಗೆ, ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ಶಾಕೀರ್ ತಲವಾರು ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಾ ಓಡಾಡಿದ್ದಾನೆ ಎನ್ನಲಾಗಿದೆ. ಬಳಿಕ ವಿನಮ್ರ ಬಾರ್‌ಗೆ ತೆರಳಿ ತಲವಾರು ಬೀಸುತ್ತಾ ದಾಂಧಲೆ ನಡೆಸಿದ್ದು, ಬಾರ್ ಬಂದ್ ಮಾಡುವಂತೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ವೇಳೆ ಬಾರ್‌ನಲ್ಲಿದ್ದ ಗ್ರಾಹಕರು ಆತಂಕಗೊಂಡು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ ಎನ್ನಲಾಗಿದೆ. ಶಾಕೀರ್‌ಗೆ ಆಸ್ಪಕ್ ಸಾಥ್ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ದೃಶ್ಯಗಳು ಬಾರ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಕುಡಿದ ಮತ್ತಿನಲ್ಲಿ ತಲವಾರು ಹಿಡಿದು ದಾಂಧಲೆ ನಡೆಸಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಯಾವೆಲ್ಲ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂಬುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.

