ಬೆಳಗಾವಿ : ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ಕು ವರ್ಷದ ಬಾಲಕಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ನಡೆದಿದೆ.


ಮೃತರನ್ನು ಸೈಫ್ ಮುಲ್ಲಾ (29), ಪುತ್ರಿ ಸಿಜಾ ಸೈಫ್ ಮುಲ್ಲಾ (4) ಹಾಗೂ ಇಮ್ತಿಯಾಜ್ ಬಡಗಾಂವ (35) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 5 ವರ್ಷದ ಜೀಯಾನ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದೇ ಬೈಕ್ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದ ವೇಳೆ ಕೊಣ್ಣೂರ ಪಟ್ಟಣದ ಶ್ರೀಕರೆಮ್ಮಾ ದೇವಸ್ಥಾನದ ಸಮೀಪ ಅಪಘಾತ ಸಂಭವಿಸಿದೆ. ಹಿಡಕಲ್ನಿಂದ ಗೋಕಾಕಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಗೋಕಾಕ್ ಫಾಲ್ಸ್ನಿಂದ ಕೊಣ್ಣೂರಿಗೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ.
ಅಪಘಾತದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಗೋಕಾಕ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

