Sunday, August 2, 2026
Homeರಾಜಕೀಯಮೈಸೂರು : "ನನ್ನ ಜೀವನಯಾತ್ರೆಯ ಶಕ್ತಿ ರಾಮಕೃಷ್ಣ ಮಿಷನ್" – ಮೈಸೂರಿನಲ್ಲಿ ಮೋದಿ ಭಾವುಕ ನುಡಿ.

ಮೈಸೂರು : “ನನ್ನ ಜೀವನಯಾತ್ರೆಯ ಶಕ್ತಿ ರಾಮಕೃಷ್ಣ ಮಿಷನ್” – ಮೈಸೂರಿನಲ್ಲಿ ಮೋದಿ ಭಾವುಕ ನುಡಿ.

ಮೈಸೂರು : ಮೈಸೂರಿನ ವಿವೇಕ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕ ಭಾಷಣ ಮಾಡಿದರು. ತಮ್ಮ ಜೀವನಯಾತ್ರೆಗೆ ರಾಮಕೃಷ್ಣ ಮಿಷನ್ ನೀಡಿದ ಪ್ರೇರಣೆಯನ್ನು ಸ್ಮರಿಸಿದ ಅವರು, “ನನ್ನ ಯಾತ್ರೆ ಎಲ್ಲಿಂದ ಆರಂಭವಾಯಿತು, ಇಂದು ನಾನು ಈ ಸ್ಥಾನದಲ್ಲಿದ್ದೇನೆ ಎಂದರೆ ಅದಕ್ಕೆ ರಾಮಕೃಷ್ಣ ಮಿಷನ್‌ನ ಮಹತ್ತರ ಕೊಡುಗೆ ಇದೆ” ಎಂದು ಹೇಳಿದರು.

ಭಾಷಣದ ಆರಂಭದಲ್ಲೇ ಚಾಮುಂಡೇಶ್ವರಿಗೆ ನಮನ ಸಲ್ಲಿಸಿದ ಮೋದಿ, ಇತ್ತೀಚೆಗೆ ಗುರುಪೂರ್ಣಿಮೆಯ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿ ಸಂತರ ಸಾನ್ನಿಧ್ಯ ದೊರೆತಿದ್ದು, ಇಂದು ಮತ್ತೆ ಮೈಸೂರಿನಲ್ಲಿ ಸಂತರ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿರುವುದು ತಮ್ಮ ಭಾಗ್ಯ ಎಂದು ಹೇಳಿದರು.

ಮೈಸೂರು ದೇವಾಲಯಗಳ ಪರಂಪರೆ, ದಸರಾ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಯ ತವರೂರು ಎಂದು ಬಣ್ಣಿಸಿದ ಪ್ರಧಾನಿ, ಶ್ರೀ ರಾಮಕೃಷ್ಣ ಆಶ್ರಮ ಮತ್ತು ಸ್ವಾಮಿ ವಿವೇಕಾನಂದರೊಂದಿಗೆ ಮೈಸೂರಿಗೆ ಇರುವ ಐತಿಹಾಸಿಕ ನಂಟನ್ನು ಸ್ಮರಿಸಿದರು. ರಾಷ್ಟ್ರಕವಿ ಕುವೆಂಪು ಅವರ ಕೊಡುಗೆಯನ್ನೂ ಅವರು ಪ್ರಸ್ತಾಪಿಸಿದರು.

ಯುವಕರ ಕುರಿತು ಮಾತನಾಡಿದ ಮೋದಿ, “ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಅವರ ಸುಖ-ದುಃಖಕ್ಕಿಂತ ದೇಶವೇ ದೊಡ್ಡದಾಗಿರಬೇಕು ಎಂಬುದು ಸ್ವಾಮಿ ವಿವೇಕಾನಂದರ ಸಂದೇಶ” ಎಂದರು. ಭಾರತ ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿರುವುದಕ್ಕೆ ಯುವಶಕ್ತಿಯೇ ಕಾರಣವಾಗಿದ್ದು, ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ತಂತ್ರಜ್ಞಾನ, ಅಂತರಿಕ್ಷ ವಿಜ್ಞಾನ, ಸ್ಟಾರ್ಟ್‌ಅಪ್‌ಗಳು ಹಾಗೂ ‘ಮೇಕ್ ಇನ್ ಇಂಡಿಯಾ’ ಯಶಸ್ಸಿನಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಶ್ಲಾಘಿಸಿದರು.

ಕಳೆದ 12 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಐಟಿಐ ಹಾಗೂ ಐಐಟಿ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಳವಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (NEP) ಯುವಕರಿಗೆ ಹೊಸ ಅವಕಾಶಗಳನ್ನು ಕಲ್ಪಿಸಿದೆ ಎಂದರು. ಮಹಿಳೆಯರು ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭೆಗಳಿಗೆ ಸಮಾನ ಅವಕಾಶಗಳು ಸಿಗುತ್ತಿವೆ ಎಂದು ಹೇಳಿದರು.

ಮೈಸೂರು ದೇಶದ ಸ್ವಚ್ಛ ನಗರಗಳಲ್ಲಿ ಒಂದಾಗಿದ್ದು, ಅದರ ಸ್ವಚ್ಛತೆಯನ್ನು ಕಾಪಾಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ ಮೋದಿ, ಪರಿಸರ ಸಂರಕ್ಷಣೆ ಹಾಗೂ ನೀರಿನ ಸಂರಕ್ಷಣೆಯ ಮಹತ್ವವನ್ನೂ ಒತ್ತಿ ಹೇಳಿದರು.

ಭಾಷಣದ ಕೊನೆಯಲ್ಲಿ ಕರ್ನಾಟಕ ಮತ್ತು ಕನ್ನಡಿಗರನ್ನು ಶ್ಲಾಘಿಸಿದ ಪ್ರಧಾನಿ, “ಕರ್ನಾಟಕ ಮಹಾನ್ ಲೇಖಕರ ನಾಡು. ಇಲ್ಲಿ ಓದುವ ಸಂಸ್ಕೃತಿ ಬಲವಾಗಿದೆ. ಯುವಕರು ಕನ್ನಡ ಸಾಹಿತ್ಯವನ್ನು ಹೆಚ್ಚು ಓದಿ, ಅದರ ಶ್ರೀಮಂತಿಕೆಯನ್ನು ಅರಿಯಬೇಕು” ಎಂದು ಸಲಹೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular