ಮಂಗಳೂರು : ಸುಮಾರು 11 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಚುಂಕಿ ಆಕಾಶಭವನ @ ಸಂತೋಷ್ ಎಸ್ (34), ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕರ್ನೇಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
2015ರಲ್ಲಿ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶಭವನದಲ್ಲಿ ನಡೆದ ಮದುವೆಯ ಮದುರಂಗಿ ಕಾರ್ಯಕ್ರಮದ ವೇಳೆ ಅಶೋಕ ಕುಮಾರ ಕೊಟ್ಟಾರಿ ಹಾಗೂ ಜಗ್ಗು ನಡುವೆ ನಡೆದ ಮಾತಿನ ಚಕಮಕಿಯ ಬಳಿಕ, ಸಂತೋಷ್ ಹಾಗೂ ಇತರ ಆರೋಪಿಗಳು ಸೇರಿಕೊಂಡು ಅಶೋಕ ಕುಮಾರ ಕೊಟ್ಟಾರಿ ಅವರ ಮೇಲೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಯತ್ನ ಎಸಗಿದ್ದರು. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ 135/2015ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ದಿನದಿಂದಲೇ ಸಂತೋಷ್ ತಲೆಮರೆಸಿಕೊಂಡಿದ್ದರಿಂದ, ನ್ಯಾಯಾಲಯವು ಆತನ ವಿರುದ್ಧ LPC ವಾರಂಟ್ (25/2025) ಹೊರಡಿಸಿತ್ತು. ಸಿಸಿಬಿ ತಂಡ ದೀರ್ಘಕಾಲದ ಮಾಹಿತಿ ಸಂಗ್ರಹದ ಬಳಿಕ ಆರೋಪಿ ಶಿವಮೊಗ್ಗ ಭಾಗದಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಜುಲೈ 29ರಂದು ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ಬಂಧಿಸಿದೆ. ಬಳಿಕ ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಯನ್ನು ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಆರೋಪಿಯ ಪತ್ತೆ ಮತ್ತು ಬಂಧನ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.


