ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸುಧಾರಿಸಿ ಶಾಂತಿ ಹಾಗೂ ಸ್ಥಿರತೆ ಮರುಸ್ಥಾಪಿಸಲು ಉಭಯ ದೇಶಗಳ 117 ಗಣ್ಯರು ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಜಂಟಿಯಾಗಿ ಪತ್ರ ಬರೆದಿದ್ದಾರೆ.
ಸೆಂಟರ್ ಫಾರ್ ಪೀಸ್ ಅಂಡ್ ಪ್ರೋಗ್ರೆಸ್ ಸಂಸ್ಥೆ ಸಿದ್ಧಪಡಿಸಿರುವ ಈ ಪತ್ರಕ್ಕೆ ಭಾರತದ 61 ಹಾಗೂ ಪಾಕಿಸ್ತಾನದ 56 ಗಣ್ಯರು ಸಹಿ ಹಾಕಿದ್ದಾರೆ. ಭಾರತದಿಂದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಆರ್ಜೆಡಿ ಸಂಸದ ಮನೋಜ್ ಝಾ ಸೇರಿದಂತೆ ಹಲವು ಪ್ರಮುಖರು ಸಹಿ ಹಾಕಿದ್ದಾರೆ.
ಪತ್ರದಲ್ಲಿ ಉಭಯ ರಾಷ್ಟ್ರಗಳು ಮಾತುಕತೆ ಆರಂಭಿಸಿ ಸಾಮಾನ್ಯ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಬೇಕು ಎಂದು ಮನವಿ ಮಾಡಲಾಗಿದೆ. ನವದೆಹಲಿ ಮತ್ತು ಇಸ್ಲಾಮಾಬಾದ್ನಲ್ಲಿ ಮತ್ತೆ ರಾಯಭಾರಿಗಳನ್ನು ನೇಮಕ ಮಾಡುವುದು, ವೀಸಾ ಸೇವೆ ಪುನರಾರಂಭಿಸುವುದು ಹಾಗೂ ವಾಣಿಜ್ಯ ವಿಮಾನಗಳಿಗೆ ವಾಯುಪ್ರದೇಶ ಬಳಕೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಲಾಗಿದೆ.
ಆದರೆ, ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಂದೇ ವೇಳೆ ಸಾಗಲು ಸಾಧ್ಯವಿಲ್ಲ ಎಂಬುದು ಭಾರತದ ಅಧಿಕೃತ ನಿಲುವಾಗಿದ್ದು, ಗಡಿ ದಾಟಿ ಭಯೋತ್ಪಾದನೆ ನಿಲ್ಲದವರೆಗೆ ದ್ವಿಪಕ್ಷೀಯ ಮಾತುಕತೆ ಕಷ್ಟಸಾಧ್ಯ ಎಂಬ ನಿಲುವನ್ನು ಭಾರತ ಈ ಹಿಂದೆಯೇ ಸ್ಪಷ್ಟಪಡಿಸಿದೆ.

