ಬೆಳಗಾವಿ : ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಸಮಿಟ್ ಅಪಾರ್ಟ್ಮೆಂಟ್ನಲ್ಲಿ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಾಳಿಯ ವೇಳೆ ಮಹತ್ವದ ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇಡಿ ಅಧಿಕಾರಿಗಳು ಬೆಳಗಾವಿಯ ದೂರದರ್ಶನ ನಗರದಲ್ಲಿರುವ ಮಂಜುನಾಥ ಅವರ ನಿವಾಸ, ಬೆಂಗಳೂರಿನ ಅಪಾರ್ಟ್ಮೆಂಟ್, ಮೈಸೂರಿನಲ್ಲಿರುವ ಅವರ ಆಪ್ತ ಸ್ನೇಹಿತೆಯ ಮನೆ, ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿರುವ ಆಪ್ತರ ನಿವಾಸ ಹಾಗೂ ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ಸ್ನೇಹಿತನ ಮನೆ ಸೇರಿ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಸತೀಶ ಜಾರಕಿಹೊಳಿ ಅವರ ಬಾಮೈದರಾಗಿರುವ ವೈ. ಮಂಜುನಾಥ ಅವರು ಬಳ್ಳಾರಿ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿದ್ದಾರೆ. ಬೇನಾಮಿ ಹೆಸರಿನಲ್ಲಿ ಜಮೀನು, ಬಾರ್, ರೆಸ್ಟೋರೆಂಟ್ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಅಕ್ರಮವಾಗಿ ಸಂಪಾದಿಸಿರುವ ಆರೋಪಗಳು ಕೇಳಿಬಂದಿವೆ.
ವಿದೇಶಿ ಅಕ್ರಮ ಹಣಕಾಸು ವ್ಯವಹಾರ ಮತ್ತು ಹವಾಲಾ ಜಾಲದ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಂದಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.

