Wednesday, August 12, 2026
Homeರಾಜ್ಯಮಂಡ್ಯ : ಮೇಲುಕೋಟೆ ಯೋಗನರಸಿಂಹಸ್ವಾಮಿ ದೇಗುಲದಲ್ಲಿ ಕಳ್ಳತನ ಆರೋಪ: ಅರ್ಚಕ ಸೇರಿ 6 ಮಂದಿ ಅಮಾನತು.

ಮಂಡ್ಯ : ಮೇಲುಕೋಟೆ ಯೋಗನರಸಿಂಹಸ್ವಾಮಿ ದೇಗುಲದಲ್ಲಿ ಕಳ್ಳತನ ಆರೋಪ: ಅರ್ಚಕ ಸೇರಿ 6 ಮಂದಿ ಅಮಾನತು.

ಮಂಡ್ಯ : ಜಿಲ್ಲೆಯ ಮೇಲುಕೋಟೆಯ ಐತಿಹಾಸಿಕ ಯೋಗನರಸಿಂಹಸ್ವಾಮಿ ದೇಗುಲದಲ್ಲಿ ಹುಂಡಿ ಕಳ್ಳತನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಗುಲದ ಅರ್ಚಕ, ಪಾರುಪತ್ತೆದಾರ ಸೇರಿ 6 ಮಂದಿಯನ್ನು ಅಮಾನತುಗೊಳಿಸಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ (ಇಓ) ಶೀಲಾ ಆದೇಶ ಹೊರಡಿಸಿದ್ದಾರೆ.

ಅಮಾನತುಗೊಂಡವರಲ್ಲಿ ಅರ್ಚಕ ನಾರಾಯಣಭಟ್ಟ, ಪಾರುಪತ್ತೆದಾರ ಶ್ರೀಧರ್, ತಿರುವಂಗಢಚಾರ್, ಮಣಿಗಾರ ಶ್ರೀಕಸ್ತೂರಿ ಶ್ರೀನಿವಾಸ್, ಕಾವಲುಗಾರ ಗಂಗಾಧರ್ ಹಾಗೂ ಬಸವರಾಜ್ ಸೇರಿದ್ದಾರೆ.

ಕಳೆದ ಜನವರಿಯಲ್ಲಿ ದೇಗುಲದ ಹುಂಡಿಯಲ್ಲಿದ್ದ ನಗದು, ಚಿನ್ನ ಹಾಗೂ ಬೆಳ್ಳಿ ವಸ್ತುಗಳ ಕಳ್ಳತನದ ಆರೋಪ ಬೆಳಕಿಗೆ ಬಂದಿತ್ತು. ದೇಗುಲದ ಸಿಸಿಟಿವಿ ವ್ಯವಸ್ಥೆಯನ್ನು ಹಾನಿಗೊಳಿಸಿ ಕೃತ್ಯ ಎಸಗಿರುವುದು ಪತ್ತೆಯಾಗಿದ್ದು, ಬಳಿಕ ಆಡಳಿತ ಮಂಡಳಿ ಅಳವಡಿಸಿದ್ದ ರಹಸ್ಯ ಕ್ಯಾಮರಾವನ್ನೂ ದುಷ್ಕರ್ಮಿಗಳು ಕೆಡಿಸಿರುವ ಆರೋಪ ಕೇಳಿಬಂದಿತ್ತು.

ಹುಂಡಿಯಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಅರ್ಚಕರು, ಪಾರುಪತ್ತೆದಾರರು ಹಾಗೂ ಭದ್ರತಾ ಸಿಬ್ಬಂದಿಗಳ ವಿರುದ್ಧ ಆರೋಪ ಕೇಳಿಬಂದಿತ್ತು. ನೋಟಿಸ್ ನೀಡಿದರೂ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಹಾಗೂ ಆಡಳಿತ ಮಂಡಳಿಯ ತನಿಖೆಯಲ್ಲಿ ಕರ್ತವ್ಯಲೋಪ ಸಾಬೀತಾದ ಹಿನ್ನಲೆಯಲ್ಲಿ 6 ಮಂದಿಯನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ಕೆಲ ದಿನಗಳ ಹಿಂದಷ್ಟೇ ಎಫ್ಐಆರ್ ದಾಖಲಾಗಿದ್ದು, ದೇಗುಲದಲ್ಲಿ ನಿಜವಾಗಿಯೂ ಕಳ್ಳತನ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular