ತುಮಕೂರು : ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ G. ಪರಮೇಶ್ವರ್ ತಮ್ಮ ಸರಳ ನಡೆ-ನುಡಿಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಕೊರಟಗೆರೆಯ ಅಭಿನಂದನಾ ಸಮಾರಂಭ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಮಾರ್ಗಮಧ್ಯೆ ನಾಗೇನಹಳ್ಳಿಯ ರಸ್ತೆಬದಿಯ ಪುಟ್ಟ ಟೀ ಅಂಗಡಿಯಲ್ಲಿ ನಿಂತ ಡಿಸಿಎಂ, ಕಾರ್ಯಕರ್ತರೊಂದಿಗೆ ಕುಳಿತು ಚಹಾ ಸವಿದರು. ಯಾವುದೇ ಆಡಂಬರವಿಲ್ಲದೆ ಸಾಮಾನ್ಯರಂತೆ ಟೀ ಅಂಗಡಿಗೆ ತೆರಳಿ ಚಹಾ ಸೇವಿಸಿದ ಪರಮೇಶ್ವರ ಅವರ ನಡೆ ಸ್ಥಳೀಯರ ಗಮನ ಸೆಳೆಯಿತು.
ಚಹಾ ಸವಿಯುತ್ತಲೇ ತಾವು ಮಧುಗಿರಿ ಕ್ಷೇತ್ರದ ಶಾಸಕರಾಗಿದ್ದ ದಿನಗಳನ್ನು ನೆನಪಿಸಿಕೊಂಡ ಡಿಸಿಎಂ, ಹಳೆಯ ರಾಜಕೀಯ ಅನುಭವಗಳು ಹಾಗೂ ಘಟನೆಗಳನ್ನು ಕಾರ್ಯಕರ್ತರೊಂದಿಗೆ ಹಂಚಿಕೊಂಡರು. ಡಿಸಿಎಂ ಅವರ ಸರಳತೆ ಮತ್ತು ಜನಸಾಮಾನ್ಯರೊಂದಿಗೆ ಬೆರೆಯುವ ಗುಣವನ್ನು ಕಂಡ ನಾಗೇನಹಳ್ಳಿ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಅಪರೂಪದ ಕ್ಷಣದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿವೆ.

