ಮಂಗಳೂರು/ಬೆಂಗಳೂರು : ಧರ್ಮಸ್ಥಳ ಗ್ರಾಮದ ಬುರುಡೆ ಸಂಚು ಪ್ರಕರಣದ ತನಿಖೆ ಕುರಿತಂತೆ ಸಲ್ಲಿಕೆಯಾಗಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠವು ರಾಜ್ಯ ಸರ್ಕಾರ ಹಾಗೂ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ನೋಟಿಸ್ ಜಾರಿಗೊಳಿಸಿದೆ.
ಚಿನ್ನ ಸಿ.ಎನ್. (ಚಿನ್ನಯ್ಯ) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಎಫ್ಐಆರ್ ಸಂಖ್ಯೆ 39/2025ಕ್ಕೆ ಸಂಬಂಧಿಸಿದ ತನಿಖೆಯ ಪ್ರಸ್ತುತ ಸ್ಥಿತಿಗತಿ ಕುರಿತು ಮಾಹಿತಿ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಿದೆ. ಜೊತೆಗೆ, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದೆ.
ಅರ್ಜಿದಾರರ ಪರವಾಗಿ, ಪ್ರಕರಣದ ನಿಜವಾದ ಆರೋಪಿಗಳ ಹೆಸರನ್ನು ತನಿಖಾ ಸಂಸ್ಥೆಗೆ ನೀಡಿದ್ದರೂ ಅವರ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, ಪ್ರಾಥಮಿಕ ವರದಿಯಲ್ಲಿ ಉಲ್ಲೇಖಗೊಂಡಿರುವವರ ವಿರುದ್ಧವೂ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆದಿಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಇದೇ ವೇಳೆ, ಎಫ್ಐಆರ್ ಸಂಖ್ಯೆ 39/2025 ದಾಖಲಾಗಿ ಸಾಕಷ್ಟು ಸಮಯ ಕಳೆದಿದ್ದರೂ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹಾಗೂ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ಎಸ್ಐಟಿ ಮತ್ತು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಚಿನ್ನಯ್ಯ ಮನವಿ ಮಾಡಿದ್ದಾರೆ.
ಹೈಕೋರ್ಟ್ ನೋಟಿಸ್ ಹಿನ್ನೆಲೆಯಲ್ಲಿ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಎಸ್ಐಟಿ ಸಲ್ಲಿಸುವ ವರದಿ ಹಾಗೂ ಮುಂದಿನ ವಿಚಾರಣೆಯತ್ತ ಗಮನ ನೆಟ್ಟಿದೆ.

