ಬೀಜಿಂಗ್ : ಜಗತ್ತಿನ ಅತಿದೊಡ್ಡ ಚಿಪ್ ತಯಾರಿಕಾ ಸಂಸ್ಥೆಯಾಗಿರುವ ಟಿಎಸ್ಎಂಸಿ (Taiwan Semiconductor Manufacturing Company) ಬೆಂಬಲದಿಂದ ತೈವಾನ್ ಇದೀಗ ಷೇರು ಮಾರುಕಟ್ಟೆ ಮೌಲ್ಯದಲ್ಲಿ ಭಾರತವನ್ನು ಹಿಂದಿಕ್ಕಿದೆ.
ಬ್ಲೂಂಬರ್ಗ್ ವರದಿ ಪ್ರಕಾರ, ಸೋಮವಾರ ತೈವಾನ್ನ ಷೇರು ಮಾರುಕಟ್ಟೆ ಮೌಲ್ಯ 4.95 ಲಕ್ಷ ಕೋಟಿ ಡಾಲರ್ಗೆ ಏರಿಕೆಯಾದರೆ, ಭಾರತದ ಮಾರುಕಟ್ಟೆ ಮೌಲ್ಯ 4.92 ಲಕ್ಷ ಕೋಟಿ ಡಾಲರ್ಗೆ ಇಳಿಕೆಯಾಗಿದೆ. ಇದರೊಂದಿಗೆ ತೈವಾನ್ ವಿಶ್ವದ ಐದನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
ಅಮೆರಿಕ, ಚೀನಾ, ಜಪಾನ್ ಮತ್ತು ಹಾಂಗ್ಕಾಂಗ್ ಬಳಿಕ ತೈವಾನ್ ಐದನೇ ಸ್ಥಾನದಲ್ಲಿದೆ. ತೈವಾನ್ನ ಈ ಏರಿಕೆಗೆ ಪ್ರಮುಖ ಕಾರಣ ಟಿಎಸ್ಎಂಸಿ ಕಂಪನಿಯ ಭಾರೀ ಬೆಳವಣಿಗೆ ಎನ್ನಲಾಗಿದೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಬೂಮ್ನಿಂದ ಲಾಭ ಪಡೆದಿರುವ ಕಂಪನಿಯ ಷೇರುಗಳು ಈ ವರ್ಷದಲ್ಲಿ ಶೇಕಡಾ 49ರಷ್ಟು ಏರಿಕೆ ಕಂಡಿವೆ.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಟಿಎಸ್ಎಂಸಿಯ ಪ್ರಾಬಲ್ಯ ಹಾಗೂ AI ತಂತ್ರಜ್ಞಾನ ಕಂಪನಿಗಳ ಬಗ್ಗೆ ಜಾಗತಿಕ ಹೂಡಿಕೆದಾರರಲ್ಲಿ ಮೂಡಿರುವ ಆಶಾವಾದ ತೈವಾನ್ ಮಾರುಕಟ್ಟೆ ಮೌಲ್ಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.


