ವಿಜಯಪುರ : ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಮಾತನಾಡಿ, ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ದೊಡ್ಡ ಕೊರತೆ ಇದೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸರ್ಕಾರದ ವಿರುದ್ಧ ಧ್ವನಿ ಎತ್ತುವ ನೈತಿಕತೆ ಇಲ್ಲ ಎಂದು ಆರೋಪಿಸಿದ ಅವರು, ಅವರ ವಿರುದ್ಧ ಹಲವು ಭ್ರಷ್ಟಾಚಾರ ಆರೋಪಗಳಿವೆ ಎಂದು ಹೇಳಿದರು. ಇದೇ ವೇಳೆ ವಿಜಯೇಂದ್ರ ಅವರ ಕುಟುಂಬದ ವಿರುದ್ಧವೂ ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದರು.
ಯತ್ನಾಳ್ ಅವರು, “ಕೆಲವು ಸ್ವಾಮೀಜಿಗಳ ಪ್ರಭಾವದಿಂದ ಪಕ್ಷದ ರಾಜಕೀಯ ನಡೆಯುತ್ತಿದೆ. ವಿಜಯೇಂದ್ರರನ್ನು ಕೈಬಿಟ್ಟರೆ ಲಿಂಗಾಯತರು ಪ್ರತಿಭಟನೆ ಮಾಡುತ್ತಾರೆ ಎಂದು ಒತ್ತಡ ತರುತ್ತಿದ್ದಾರೆ” ಎಂದು ಆರೋಪಿಸಿದರು.
ಪಕ್ಷದ ಒಳರಾಜಕೀಯ ಕುರಿತು ಮಾತನಾಡಿದ ಅವರು, “ಬಿಜೆಪಿಗೆ ಇಬ್ಬರು ವೀಕ್ಷಕರು ಬಂದಿದ್ದಾರೆ. ಅವರು ಪ್ರಾಮಾಣಿಕವಾಗಿ ವರದಿ ನೀಡಿದರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯುತ್ತದೆ. ಇದೇ ಭ್ರಷ್ಟ ಕುಟುಂಬವನ್ನು ಮುಂದುವರಿಸಿದರೆ ಪಕ್ಷಕ್ಕೆ ಕಷ್ಟವಾಗಲಿದೆ” ಎಂದು ಹೇಳಿದರು.
ಇದೇ ವೇಳೆ ಕೆಲವು ಬಿಜೆಪಿ ಪದಾಧಿಕಾರಿಗಳು ತಮ್ಮ ಪರವಾಗಿದ್ದಾರೆ ಎಂದು ಹೇಳಿದ ಯತ್ನಾಳ್, ರಾಜೀವ್, ಪ್ರೀತಂ ಗೌಡ ಹಾಗೂ ರುದ್ರೇಶ್ ಹೆಸರುಗಳನ್ನು ಉಲ್ಲೇಖಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿದ ಯತ್ನಾಳ್, “ಮೋದಿ ಅವರು ಹಗಲು-ರಾತ್ರಿ ದುಡಿಯುತ್ತಾರೆ. ಆದರೆ ರಾಜ್ಯದಲ್ಲಿ ಪಕ್ಷವನ್ನು ಕಳ್ಳರ ಕೈಗೆ ಕೊಟ್ಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.


