ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸುರಿದ ಭಾರೀ ಮಳೆಯ ಪರಿಣಾಮ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಹವಾಮಾನ ವೈಪರೀತ್ಯದ ಕಾರಣದಿಂದ ವಿವಿಧ ಕಡೆಯಿಂದ ಆಗಮಿಸಿದ್ದ ಎರಡು ವಿಮಾನಗಳು ಬಜಪೆಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಸುಮಾರು ಅರ್ಧ ಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿದವು. ಬಂಟ್ವಾಳ ತಾಲೂಕಿನ ವಿಟ್ಲ ಭಾಗದ ಮೇಲೆ ತಗ್ಗು ಎತ್ತರದಲ್ಲಿ ವಿಮಾನಗಳು ಸಂಚರಿಸಿದ್ದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಭೂಮಿಗೆ ಸಮೀಪದಲ್ಲೇ ವಿಮಾನಗಳು ವಲಯ ಸುತ್ತುತ್ತಿರುವ ದೃಶ್ಯಗಳು ಸಾರ್ವಜನಿಕರ ಗಮನ ಸೆಳೆದವು.
ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಎರಡೂ ವಿಮಾನಗಳು ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದವು ಎಂದು ತಿಳಿದುಬಂದಿದೆ. ಭಾರೀ ಮಳೆ ಹಾಗೂ ಗಾಳಿಯ ಪರಿಣಾಮ ವಿಮಾನಗಳ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ತಾತ್ಕಾಲಿಕ ತೊಂದರೆ ಉಂಟಾಗಿತ್ತು.


