ಮಂಗಳೂರು ; ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ ಅನುಕೂಲತೆ ಹಾಗೂ ಡಿಜಿಟಲ್ ಸೇವೆಗಳ ವಿಸ್ತರಣೆಯ ಉದ್ದೇಶದಿಂದ ಆಧುನಿಕ ಇ-ಟಿಕೇಟಿಂಗ್ ವ್ಯವಸ್ಥೆಗೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖಾ ಸಚಿವ ಎನ್.ಎಸ್. ಬೋಸರಾಜು ಅವರು ಬುಧವಾರ ಚಾಲನೆ ನೀಡಿದರು.


ಪಿಲಿಕುಳದ ಬಾಕ್ಸ್ ಆಫೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಮೇಯರ್ ಭಾಸ್ಕರ್ ಕೆ., ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ಕೆನರಾ ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದರು.
ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಮಂಜುನಾಥ ಬಿ. ಸಿಂಫೈ ಇ-ಟಿಕೇಟಿಂಗ್ ವ್ಯವಸ್ಥೆಯ ಕಾರ್ಯವಿಧಾನ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಜಗನ್ನಾಥ ನಿರೂಪಿಸಿದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಇದುವರೆಗೆ ಭೌತಿಕ ಟಿಕೇಟ್ ವ್ಯವಸ್ಥೆ ಬಳಕೆಯಲ್ಲಿದ್ದು, ಇದೀಗ ಕಾಗದರಹಿತ ಹಾಗೂ ತಂತ್ರಜ್ಞಾನ ಆಧಾರಿತ ವೇಗವಾದ ಇ-ಟಿಕೇಟಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಪ್ರವಾಸಿಗರು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳ ಮೂಲಕ ಟಿಕೇಟ್ ಪಡೆಯಬಹುದಾಗಿದೆ. ಮೊದಲ ಹಂತದಲ್ಲಿ ಮುಖ್ಯ ಪ್ರವೇಶ ದ್ವಾರದಲ್ಲಿ ಕಿಯೋಸ್ಕ್ ಆಧಾರಿತ ಇ-ಟಿಕೇಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಡಿಜಿಟಲ್ ಪಾವತಿ, ಕ್ಯೂಆರ್ ಕೋಡ್ ಆಧಾರಿತ ಟಿಕೇಟಿಂಗ್ ಹಾಗೂ ಸ್ವಯಂ ಸೇವಾ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.


