ಮಂಗಳೂರು : ಸ್ಪೀಕರ್ U. T. ಖಾದರ್ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಕುತ್ತಾರ್‌ನಲ್ಲಿ ವೃತ್ತ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಈ ಘಟನೆ ನಡೆದಿದ್ದು, ಕೆಲ ದಿನಗಳ ಹಿಂದೆ ಸ್ಪೀಕರ್ ಯು.ಟಿ. ಖಾದರ್ ಅವರು ಉಳ್ಳಾಲ ತಾಲೂಕಿಗೆ ಭೇಟಿ ನೀಡಿದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಕುತ್ತಾರ್‌ನಲ್ಲಿ ವೃತ್ತ ನಿರ್ಮಾಣ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಅಸಮಾಧಾನಗೊಂಡಿದ್ದ ತಂಡ, ಸ್ಪೀಕರ್ ಅವರ ವಾಹನವನ್ನು ತಡೆದು ಅಸಭ್ಯವಾಗಿ ವರ್ತಿಸಿದೆ ಎಂದು ಆರೋಪಿಸಲಾಗಿದೆ. ಘಟನೆಯ ವೇಳೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಪೀಕರ್ ಅವರ ಅಂಗರಕ್ಷಕ ಮೊಹಮ್ಮದ್ ಯಾಸಿನ್ ನೀಡಿದ ದೂರಿನ ಆಧಾರದಲ್ಲಿ ಓರ್ವನನ್ನು ಪ್ರಮುಖ ಆರೋಪಿಯನ್ನಾಗಿ ಮಾಡಿ, ಆತನ ಜೊತೆಗಿದ್ದರೆನ್ನಲಾದ ಇತರ 10 ಮಂದಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಜನಪ್ರತಿನಿಧಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಜೊತೆಗೆ, ನಿಯಮ ಉಲ್ಲಂಘಿಸಿ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಕೂಡ ಪ್ರಕರಣ ದಾಖಲಿಸಲಾಗಿದೆ.


