ಚಿಕ್ಕಮಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವೇಳೆ ಭಾರೀ ಗೊಂದಲ ಉಂಟಾಗಿ, ಅಂತಿಮ ಫಲಿತಾಂಶ ಘೋಷಣೆ ಆಗದೇ ಉಳಿದಿದೆ.
ಶನಿವಾರ ನಡೆದ ಮರು ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 1,822 ಅಂಚೆ ಮತಗಳ ಎಣಿಕೆ ನಡೆಯಬೇಕಿದ್ದರೂ, ರಾತ್ರಿ 9 ಗಂಟೆಯಾದರೂ ಕಾರ್ಯ ಪೂರ್ಣಗೊಳ್ಳಲಿಲ್ಲ. ಈ ನಡುವೆ ಶಾಸಕ T. D. Rajegowda ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಇವಿಎಂ ಹಾಗೂ ಮತಪೆಟ್ಟಿಗೆಗಳಲ್ಲಿ ಟ್ಯಾಂಪರಿಂಗ್ ಆರೋಪ ಮಾಡಿ ಎಣಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಇದೇ ವೇಳೆ, ಸೋತ ಅಭ್ಯರ್ಥಿ ಡಿ . ಎನ್. ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಮರು ಎಣಿಕೆ ಕೈಗೊಳ್ಳಲಾಗಿತ್ತು.
ಗೊಂದಲದ ನಡುವೆ ಸಂಭ್ರಮ: ಮಧ್ಯಾಹ್ನ ವೇಳೆಗೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳಿಕೆ ಬಂದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಶಾಸಕ ರಾಜೇಗೌಡ ತಾವೇ ಗೆಲುವು ಘೋಷಣೆ ಮಾಡಿದ್ದಾರೆ ಆದರೆ ಬಳಿಕ ಟ್ಯಾಂಪರಿಂಗ್ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಮತಗಳ ವಿವರ:
ಒಟ್ಟು ಅಂಚೆ ಮತಗಳು: 1,822
ತಿರಸ್ಕೃತ ಮತಗಳು: 279
ಮಾನ್ಯ ಮತಗಳು: 1,540
ನೋಟಾ ಮತಗಳು: 3
ಮೂರು ವರ್ಷಗಳ ಬಳಿಕ ಮತಪೆಟ್ಟಿಗೆಗಳ ಗುರುತಿಸುವಿಕೆ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದ್ದು, ಪೆಟ್ಟಿಗೆಗಳು ಹಾನಿಗೊಳಗಾಗಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಒಟ್ಟಿನಲ್ಲಿ, ಶೃಂಗೇರಿ ಕ್ಷೇತ್ರದಲ್ಲಿ ಮರು ಮತ ಎಣಿಕೆ ಗೊಂದಲದ ಗೂಡಾಗಿ ಮಾರ್ಪಟ್ಟು, ಅಂತಿಮ ಫಲಿತಾಂಶ ಇನ್ನೂ ಅನಿಶ್ಚಿತವಾಗಿಯೇ ಉಳಿದಿದೆ.


