Monday, August 17, 2026
Homeರಾಜ್ಯಕೊಪ್ಪಳ : ಕಾತರಕಿ ಗ್ರಾಮದಲ್ಲಿ ಉತ್ತಮವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ತಪ್ಪಾಗಿ ‘ಫೇಲ್ ನಮೂದಿಸಿ...

ಕೊಪ್ಪಳ : ಕಾತರಕಿ ಗ್ರಾಮದಲ್ಲಿ ಉತ್ತಮವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ತಪ್ಪಾಗಿ ‘ಫೇಲ್ ನಮೂದಿಸಿ ಶಾಕ್, ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ, ಬಳಿಕ ಸತ್ಯ ಬಹಿರಂಗ.

ಕೊಪ್ಪಳ : ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಉತ್ತಮವಾಗಿ ಬರೆದು ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಆನ್‌ಲೈನ್ ಫಲಿತಾಂಶದಲ್ಲಿ ತಪ್ಪಾಗಿ ‘ಫೇಲ್’ ಎಂದು ತೋರಿಸಿದ ಕಾರಣ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಬಳಿಕ ಉತ್ತರಪತ್ರಿಕೆಯ ನಕಲು ಪಡೆದು ಪರಿಶೀಲಿಸಿದಾಗ ಅಂಕ ನಮೂದಿಸುವಲ್ಲಿ ನಡೆದ ಎಡವಟ್ಟು ಬಹಿರಂಗವಾಗಿದೆ.

ತಾಲ್ಲೂಕಿನ ಕಾತರಕಿ ಗ್ರಾಮದ ಸಂಜನಾ ಮಡಿವಾಳ ಎಂಬ ವಿದ್ಯಾರ್ಥಿನಿಗೆ ಮಾತೃಭಾಷೆ ಕನ್ನಡ ವಿಷಯದಲ್ಲೇ ಕೇವಲ 12 ಅಂಕ ನೀಡಲಾಗಿದ್ದು, ಆಕೆ ಫೇಲಾಗಿದ್ದಂತೆ ಫಲಿತಾಂಶದಲ್ಲಿ ತೋರಿಸಲಾಗಿತ್ತು. ಕಾತರಕಿ ಗುಡ್ಲಾನೂರಿನ ಸರ್ಕಾರಿ ಪ್ರೌಢಶಾಲೆಯ 66 ವಿದ್ಯಾರ್ಥಿಗಳ ಪೈಕಿ ಉಳಿದವರೆಲ್ಲ ಪಾಸಾಗಿದ್ದರೆ, ಸಂಜನಾ ಮಾತ್ರ ಫೇಲಾಗಿರುವುದು ಆಕೆಗೆ ಮಾನಸಿಕವಾಗಿ ಆಘಾತ ಉಂಟುಮಾಡಿತ್ತು. ಕನ್ನಡದಲ್ಲೇ ಅನುತ್ತೀರ್ಣಳಾಗಿದ್ದೇನೆ ಎಂಬ ಅವಮಾನವನ್ನು ತಾಳಲಾರದೆ, ಮನೆಯಲ್ಲಿದ್ದ ತಂದೆಯ ಔಷಧಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಮನೆಯವರು ತಕ್ಷಣ ಗಮನಿಸಿ ಮಾತ್ರೆಗಳನ್ನು ಕಸಿದುಕೊಂಡು ಆಕೆಯನ್ನು ರಕ್ಷಿಸಿದ್ದಾರೆ.

ನಂತರ ತಂದೆ-ತಾಯಿ ಹಾಗೂ ಶಿಕ್ಷಕರು ಧೈರ್ಯ ತುಂಬಿ, “ನೀನು ಚೆನ್ನಾಗಿ ಬರೆದಿದ್ದರೆ ಉತ್ತರಪತ್ರಿಕೆ ತರಿಸಿಕೋ” ಎಂಬ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸಂಜನಾ ಉತ್ತರಪತ್ರಿಕೆಯ ಪ್ರತಿಯನ್ನು ತರಿಸಿಕೊಂಡಿದ್ದಾಳೆ. ಏಪ್ರಿಲ್ 27ರಂದು ಪಡೆದ ಉತ್ತರಪತ್ರಿಕೆಯಲ್ಲಿ ಕನ್ನಡ ವಿಷಯಕ್ಕೆ 71 ಅಂಕ ಪಡೆದಿರುವುದು ದೃಢಪಟ್ಟಿದೆ.

ಆಂತರಿಕ 25 ಅಂಕ ಸೇರಿ ಕನ್ನಡ ವಿಷಯಕ್ಕೆ ಒಟ್ಟು 96 ಅಂಕಗಳಾಗುತ್ತವೆ. ಇದರಿಂದ ಆರು ವಿಷಯಗಳ ಒಟ್ಟು ಅಂಕ 448ಕ್ಕೆ ಏರಿಕೆಯಾಗಿ, ಶೇ.71.68ರಷ್ಟು ಫಲಿತಾಂಶ ಬಂದಿದೆ. ಇದರಿಂದ ಆನ್‌ಲೈನ್ ಅಂಕ ನಮೂದಿಸುವಾಗ ನಡೆದ ತಪ್ಪಿನಿಂದಲೇ ಫೇಲ್ ಎಂದು ತೋರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

“ನನ್ನಂತೆ ಇತರರಿಗೂ ಅನ್ಯಾಯ ಆಗಬಾರದು” : “ಕನ್ನಡ ವಿಷಯಕ್ಕೆ 12 ಅಂಕ ಹಾಕಿ ಫೇಲು ಮಾಡಿದ್ದರು. ಎಲ್ಲ ಸ್ನೇಹಿತೆಯರು ಪಾಸಾಗಿ, ನಾನು ಮಾತ್ರ ಫೇಲಾಗಿದ್ದಕ್ಕೆ ತುಂಬಾ ಅವಮಾನವಾಗಿತ್ತು. ಅದರಿಂದಲೇ ಆತ್ಮಹತ್ಯೆಗೆ ಯತ್ನಿಸಿದೆ. ಶಿಕ್ಷಕರ ಸಲಹೆಯಿಂದ ಉತ್ತರಪತ್ರಿಕೆ ತರಿಸಿಕೊಂಡಾಗ 71 ಅಂಕ ಬಂದಿರುವುದು ಗೊತ್ತಾಯಿತು. ತಪ್ಪು ಮಾಡಿದವರಿಗೆ ಕ್ರಮ ಕೈಗೊಳ್ಳಬೇಕು. ನನ್ನಂತೆ ಇತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು” ಎಂದು ಸಂಜನಾ ಹೇಳಿದ್ದಾರೆ.ವಿದ್ಯಾರ್ಥಿನಿ ಕುಟುಂಬವು ಫಲಿತಾಂಶ ಸರಿಪಡಿಸಲು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular