ಬೆಂಗಳೂರು : ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿಯನ್ನು ನಡುರಸ್ತೆಯಲ್ಲಿಯೇ ಗುಂಡಿಕ್ಕಿ ಹತ್ಯೆಗೈದಿದ್ದ ಪತಿ ಬಾಲಮುರುಗನ್,ಬೆಂಗಳೂರಿನ ವೈಟ್ಫೀಲ್ಡ್ನ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಈ ಪ್ರಕರಣದ ಸಂಬಂಧ ತನಿಖೆ ಪೂರ್ಣಗೊಳಿಸಿದ್ದ ಮಾಗಡಿರಸ್ತೆ ಠಾಣೆ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಅದರಲ್ಲಿ ಆರೋಪಿ ಬಾಲಮುರುಗನ್ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ವೈಟ್ಫೀಲ್ಡ್ನಲ್ಲಿರುವ ಶೂಟಿಂಗ್ ಅಕಾಡೆಮಿಯೊಂದರಲ್ಲಿ ಟ್ರೈನಿAಗ್ ಪಡೆದಿದ್ದ ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಬಾಲಮುರುಗನ್, ಇತರೆ ಆರೋಪಿಗಳಾದ ಮೌಳೀಶ್ ಕುಮಾರ್, ಪೆರಿಯಸ್ವಾಮಿ, ರಾಹುಲ್, ಹರಿ, ಸೂರ್ಯ ಅವರೊಂದಿಗೆ ಮೆಜೆಸ್ಟಿಕ್ನಲ್ಲಿರುವ ಲಾಡ್ಜ್ವೊಂದರಲ್ಲಿ ಸಭೆ ಮಾಡಿ, ಭುವನೇಶ್ವರಿ ಅವರನ್ನು ಹತ್ಯೆ ಮಾಡಲು ಒಳಸಂಚು ರೂಪಿಸಿ ಕೊಲೆ ಮಾಡಲು ಸ್ಥಳವನ್ನು ನಿಗದಿ ಮಾಡಿಕೊಂಡಿದ್ದರು. ಆರೋಪಿ ಬಾಲಮುರುಗನ್ ಬಿಹಾರಕ್ಕೆ ತೆರಳಿ 80 ಸಾವಿರ ರೂ. ನೀಡಿ ಎರಡು ಪಿಸ್ತೂಲ್ ಖರೀದಿ ಮಾಡಿಕೊಂಡು ಬಂದಿದ್ದ. ಆ ಎರಡು ಪಿಸ್ತೂಲ್ಗಳನ್ನು ತನ್ನ ಬಳಿ ಇಟ್ಟುಕೊಂಡರೆ ಅನುಮಾನ ಬರುತ್ತದೆ ಎಂದು ಅದರಲ್ಲಿ ಒಂದು ಪಿಸ್ತೂಲ್ ಅನ್ನು ಮತ್ತೊಬ್ಬ ಆರೋಪಿಗೆ ನೀಡಿದ್ದ ಆತ ಅದನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿದ್ದ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.
ಪ್ರಕರಣದ ವಿವರ: ೨೦೨೫ರ ಡಿ.೨೩ರಂದು ಪತ್ನಿ ಭುವನೇಶ್ವರಿ (39) ಅವರನ್ನು ಹತ್ಯೆ ಮಾಡಿದ ಆರೋಪದಡಿ ಪತಿ ತಮಿಳುನಾಡು ಮೂಲದ ಸೆಲ್ವ ಬಾಲಮುರುಗನ್, ಆತನ ಸಹಚರರಾದ ಅಭಿಮನ್ಯು ಸಿಂಗ್, ಮೌಲೇಶ್ ಕುಮಾರ್, ಪೆರಿಯಾಸ್ವಾಮಿಯನ್ನು ಬಂಧಿಸಲಾಗಿತ್ತು. ಇನ್ನು ಪ್ರಕರಣದಲ್ಲಿ
ರಾಹುಲ್, ಹರೀಶ್ ಮತ್ತು ಸೂರ್ಯ ತಲೆಮರೆಸಿಕೊಂಡಿದ್ದಾರೆ.


