Thursday, March 12, 2026
Flats for sale
Homeಜಿಲ್ಲೆಮಂಗಳೂರು ; ಸೆ.22ರಿಂದ ಮಂಗಳೂರು ದಸರಾ ಮಹೋತ್ಸವದ ಸಂಭ್ರಮ,ಅ.2ರಂದು ಭವ್ಯ ಶೋಭಾಯಾತ್ರೆ….!

ಮಂಗಳೂರು ; ಸೆ.22ರಿಂದ ಮಂಗಳೂರು ದಸರಾ ಮಹೋತ್ಸವದ ಸಂಭ್ರಮ,ಅ.2ರಂದು ಭವ್ಯ ಶೋಭಾಯಾತ್ರೆ….!

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.22ರಂದು ಅಕ್ಟೋಬರ್ 3ರವರೆಗೆ ಮಂಗಳೂರು ದಸರಾ ಮಹೋತ್ಸವ ಜರುಗಲಿದೆ ಎಂದು ಕೋಶಧಿಕಾರಿ ಪದ್ಮರಾಜ್ ಪೂಜಾರಿಯವರು ತಿಳಿಸಿದ್ದಾರೆ.

ಸೆ.22ರಂದು ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಪುಣ್ಯಾಹ ಹೋಮ ನವಕಲಶಾಭಿಷೇಕ ನಡೆದು ಪೂರ್ವಾಹ್ನ 12ಗಂಟೆಗೆ ನವದುರ್ಗೆಯರು, ಮಹಾಗಣಪತಿ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭಗೊಂಡು ಅಕ್ಟೋಬರ್ 3ರ ತನಕ ಕೇಂದ್ರದ ಮಾಜಿ ಸಚಿವರು, ಕ್ಷೇತ್ರದ ಅಭಿವೃದ್ಧಿಯ ರುವಾರಿ ಶ್ರೀ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ದಸರಾ (ನವರಾತ್ರಿ ಮಹೋತ್ಸವ) ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಬನೆಯಿಂದ ಜರುಗಲಿದೆ. ವೈದಿಕ ಪರಂಪರೆ, ಧಾರ್ಮಿಕ ಶ್ರದ್ದೆ, ಸಂಸ್ಕೃತಿಯ ಸಂಭ್ರಮ, ಸಂಗೀತದ ಸಪ್ತಸ್ವರ, ಕಲೆ. ಸಾಹಿತ್ಯ, ಕ್ರೀಡೆಸಾಧನೆಗಳ ಏಕತೆಯ ಸಮನ್ವಯ ನವದುರ್ಗೆಯ ಆರಾಧನೆಯ ಭವ್ಯ ದಸರಾ ಈ ಬಾರಿಯ ವಿಶೇಷತೆ ಎಂದರು.

ಸೆ.22ರಂದು ಬೆಳಗ್ಗೆ 11.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಮಂಗಳೂರು ರಾಮಕೃಷ್ಣ ಮಿಶನ್‌ನ ಅಧ್ಯಕ್ಷರಾದ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಜೀ ಅವರ ದಿವ್ಯಹಸ್ತದಿಂದ ಶ್ರೀ ಬಿ.ಜನಾರ್ದನ ಪೂಜಾರಿಯವರ ಸಮ್ಮುಖದಲ್ಲಿ ಚಾಲನೆಗೊಳ್ಳಲಿದೆ ಎಂದರು.

ದೇವಸ್ಥಾನದ ಓಳಾಂಗಣದ ಮೇಲ್ದಾವಣಿ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಹೊಸಮಾದರಿಯಲ್ಲಿ ನವೀಕರಣಗೊಂಡಿದ್ದು, ಸೆ.21ರಂದು ಸಂಜೆ ಕೇತ್ರದ ನವ ನಿರ್ಮಾಣದ ರೂವಾರಿ, ಕೇಂದ್ರದ ಮಾಜಿ ಸಚಿವರು ಮಾನ್ಯ ಜನಾರ್ದನ ಪೂಜಾರಿಯವರು ಉದ್ಘಾಟಿಸಲಿದ್ದಾರೆ ಎಂದರು.

ಸೆ.22ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎನ್‌ಎಂಪಿಎ ಚೇರ್ಮನ್ ಡಾ.ವೆಂಕಟರಮಣ್ ಅಕ್ಕಚ್ಚುರಾಜು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯ ಮುಖ್ಯಸ್ಥ ರಾಜೇಂದರ್‌ ಕುಮಾರ್ ಉದ್ಘಾಟಿಸಲಿದ್ದಾರೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸಾನಿಧ್ಯ ವಿಶೇಷ ಶಾಲೆ ಮಂಗಳೂರು, ವೈಟ್‌ಡೌಸ್ ಮಂಗಳೂರು, ಎಂ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ಸೇವೆಯನ್ನು ಗುರುತಿಸಿ ಈ ಸಂದರ್ಭ ಪುರಸ್ಕರಿಸಲಾಗುವುದು. ಭರತನಾಟ್ಯದಲ್ಲಿ ಗೊಲ್ಡನ್‌ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾದನೆಗೈದ ರೆಮೋನಾ, ದೀಕ್ಷಾ ಸುವರ್ಣ ಅವರನ್ನು ಗೌರವಿಸಲಾಗುವುದು ಎಂದರು.

ಸೆ.25ರಂದು ಸಂಜೆ 6ಗಂಟೆಗೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಲೋಕಸಭೆ ಸದಸ್ಯ, ಎಐಸಿಸಿಯ ಕೆ.ಸಿ.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವರು ದಿನೇಶ್ ಗುಂಡೂರಾವ್ ಹಾಗೂ ಜನಪ್ರತಿನಿಧಿಗಳು, ಗಣ್ಯರ ಉಪಸ್ಥಿತಿಯಲ್ಲಿ ಮಾನ್ಯ ಜನಾರ್ದನ ಪೂಜಾರಿಯವರ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ ಎಂದರು. ಸೆ.28ರಂದು ಬೆಳಗ್ಗೆ 9ಕ್ಕೆ ವಿಶ್ವ ಬಿಲ್ಲವ ಮಹಿಳಾ ಸಂಘದ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾ ಹೋಮ ನೆರವೇರಲಿದೆ ಎಂದರು.

ಸಾಂಸ್ಕೃತಿಕ ಕಲಾ ವೈಭವ

ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ತಂಡಗಳನ್ನು ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಮಂಗಳೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾಪ್ರದರ್ಶನ ನೀಡಲಿದ್ದಾರೆ. 40 ತಂಡಗಳ ಸುಮಾರು 1500ಕ್ಕೂ ಅಧಿಕ ಕಲಾವಿದರಿಗೆ ಕಲಾಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೇರೆ ಬೇರೆ ಕಲಾಸಕ್ತ ಮನಸ್ಸುಗಳಿಗಾಗಿ ಭರತನಾಟ್ಯ, ಜಾನಪದ ಸಂಭ್ರಮ, ಭಕ್ತಿ ಪ್ರಧಾನ ನೃತ್ಯ ರೂಪಕ. ಯಕ್ಷಗಾನ, ಗಾನ ನಾಟ್ಯ ವೈಭವ, ತಾಳಮದ್ದಳೆ, ಹರಿಕಥೆ, ಸಂಗೀತ ಪರಿಕರಗಳ ಜುಗಲ್‌ಬಂಧಿ, ಸಪ್ತ ವೀಣಾವಾದನ, ಜಾದೂ ಪ್ರದರ್ಶನ. ನವರಸಗಳ ಸಮ್ಮಿಲನ ಈ ಬಾರಿಯ ವಿಶೇಷತೆ.

ಸಾಹಿತ್ಯ ವೈಭವ

ಸೆ.23ರಂದು ಸಂಜೆ 4ರಿಂದ 6ರವರೆಗೆ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಸಹಯೋಗದದಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಬಿ.ಮುರಾರಿ ತಂತ್ರಿ (ಸಂಸ್ಕೃತ), ಮನೋಜ್ ಕುಮಾರ್ (ಕನ್ನಡ), ವಿನೋದ ಮೂಡುಗದೆ(ಅರೆಭಾಷೆ), ಹಂಝಾ ಮಲಾರ್ (ಬ್ಯಾರಿ), ಜೊನ್ಸಿ ಪಿಂಟೋ (ಕೊಂಕಣಿ), ವೆಂಕಟೇಶ್ ನಾಯಕ್ (ಕೊಂಕಣಿ), ಡಾ ಸುರೇಶ್ ನೆಗಳಗುಳಿ (ಹವ್ಯಕ), ಡಾ.ಅಣ್ಣಯ್ಯ ಕುಲಾಲ್ (ಕುಂದಗನ್ನಡ), ಬಾಬು ಕೊರಗ ಪಾಂಗಾಳ (ಕೊರಗಭಾಷೆ), ಶ್ರೀಮತಿ ಕವಿತಾ ಅಡ್ಯೂರು (ಶಿವಳ್ಳಿ ತುಳು), ಶ್ರೀಮತಿ ಗೀತಾ ಲಕ್ಷ್ಮೀಶ ಶೆಟ್ಟಿ(ತುಳು) ಕವನ ವಾಚಿಸಲಿದ್ದಾರೆ. ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆಯುವ ತುಳು ಭಾಷಾ ಕವಿಗೋಷ್ಠಿಯಲ್ಲಿ ರೂಪಕಲಾ ಆಳ್ವ, ಗಣೇಶ್ ಪ್ರಸಾದ್ ಪಾಂಡೇಲ್, ಅಶೋಕ ಎನ್. ಕಡೇಶಿವಾಲಯ. ಸದಾನಂದ ನಾರಾವಿ. ದೊಂಬಯ್ಯ ಇಡ್ಲಿದು. ಶಶಿಕಲಾ ಭಾಸ್ಕರ್ ಬಾಕ್ರಬೈಲ್, ಪ್ರಮೀಳಾ ದೀಪಕ್ ಪೆರ್ಮುದೆ ಕವನ ವಾಚಿಸಲಿದ್ದಾರೆ. ಅಂಚೆ ಮುಖೇನ ನಡೆಸಲಾದ ಕವನ ಸ್ಪರ್ಧೆಗೆ ಅತ್ಯುತ್ತಮ ಬೆಂಬಲ ದೊರೆತಿತ್ತು. ಆಯ್ದ ಕವನಗಳನ್ನು ಒಳಗೊಂಡ ಕವನ ಸಂಕಲನ ಮುದ್ರಣಗೊಂಡು ಈ ಸಂದರ್ಭ ಬಿಡುಗಡೆಯಾಗಲಿದೆ.

ಮುದ್ದು ಶಾರದೆ ಸ್ಪರ್ಧೆ

ಸೆ.24ರಂದು ಮಕ್ಕಳಿಗಾಗಿ ಮೂರು ವಿಭಾಗದಲ್ಲಿ ಮುದ್ದು ಶಾರದೆ ಮತ್ತು ನವದುರ್ಗೆಯರ ಸ್ಪರ್ಧೆ ಬೆಳಗ್ಗೆ 9ರಿಂದ ಸಂಜೆಯವರೆಗೆ ನಡೆಯಲಿದೆ.

ದೇಹದಾಡ್ಯ ಸ್ಪರ್ಧೆ

26ರಂದು ಯುವಕರಿಗೂ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮಿಸ್ಟರ್ ಮಂಗಳೂರು ದಸರಾ ಕ್ಲಾಸಿಕ್ ರಾಜ್ಯ ಮಟ್ಟದ ದೇಹಧ್ಯಾಡ್ಯ ಸ್ಪರ್ಧೆ ಆಯೋಜಿಸಲಾಗಿದೆ.

ದಸರಾ ಮ್ಯಾರಾಥನ್

ದಸರಾ ಅಂಗವಾಗಿ 3ನೇ ವರ್ಷದ ದಸರಾ ಮ್ಯಾರಥಾನ್ 28ರಂದು ಬೆಳಗ್ಗೆ 4 ಗಂಟೆಯಿಂದ ನಡೆಯಲಿದೆ.. 21ಕೆ ರನ್, 10ಕೆ ರನ್, 5ಕೆ ರನ್, 2ಕೆ ಸ್ಯಾರಿ ರನ್ ಆಯೋಜಿಸಲಾಗಿದೆ. ಒಟ್ಟು 1,00,000ರೂ. ಬಹುಮಾನ ಘೋಷಿಸಲಾಗಿದೆ.

  • ಮಕ್ಕಳ ದಸರಾ

ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೆ.28ರಂದು ‘ಮಕ್ಕಳ ದಸರಾ’ ಪರಿಕಲ್ಪನೆಯಡಿ ಮಕ್ಕಳಿಗೋಸ್ಕರ ಕಿನ್ನಿಪಿಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸಂಗೀತ ಸ್ಪರ್ಧೆಯನ್ನು ಆಕರ್ಷಕ ಬಹುಮಾನದೊಂದಿಗೆ ಆಯೋಜಿಸಲಾಗಿದೆ. ಮಕ್ಕಳ ದಸರಾವನ್ನು ಭಾರತೀಯ ಬುದ್ಧಿವಂತ ಮಗು ಎಂದೇ ಪ್ರಖ್ಯಾತಿ ಪಡೆದ ಅಗ್ನಿವು ಕ್ಷೇತ್ರದ ಮುಖ್ಯ ದ್ವಾರದ ಬಳಿ ಬೆಳಗ್ಗೆ 9.30ಕ್ಕೆ ಉದ್ಘಾಟಿಸಿ ಬಳಿಕ ವೈಭವದ ಮಕ್ಕಳ ಮೆರವಣಿಗೆಯೊಂದಿಗೆ ಸ್ಪರ್ಧೆಗಳು ಆರಂಭವಾಗಲಿದೆ.

ಅಸಾಮಾನ್ಯ ಸ್ತ್ರೀ ಪುರಸ್ಕಾರ ಪ್ರದಾನ

ಈ ಪುರಸ್ಕಾರ ನಮ್ಮ ಕ್ಷೇತ್ರದ ಗೌರವಕ್ಕೆ ಬಹುದೊಡ್ಡ ಗರಿಮೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರ ವರೆಗೆ ನಡೆಯುವ ದಸರಾದಲ್ಲಿ ನವಶಕ್ತಿಗಳ ಆಶೀರ್ವಾದದೊಂದಿಗೆ.. ಪ್ರತಿದಿನ ಒಬ್ಬರಿಗೆ ಸಂಜೆ 7.30ಕ್ಕೆ 9 ಸಾಧಕಿಯರಿಗೆ ಅಸಾಮಾನ್ಯ ಸ್ತ್ರೀ ಪುರಸ್ಕಾರ -2025ನ್ನು ನೀಡಿ ಗೌರವಿಸಲಾಗುವುದು. ವನಜಾ ಪೂಜಾರಿ (ಸಾಮಾಜಿಕ-ಮೋಕ್ಷಧಾಮ), ವೆಂಕಮ್ಮ ಕುಡಂಬೆಟ್ಟು (ಪ್ರಸೂತಿ ತಜ್ಞೆ), ಶಾಲೆಟ್ (ಸಾಮಾಜಿಕ- ಮೂಕಪ್ರಾಣಿಗಳ ಆರೈಕೆ), ಸುಶೀಲಾ ಪಾಣಾರ (ಪಾರ್ದನ), ಯೋಗಾಕ್ಷಿ ಗಣೇಶ್ (ತೆಂಕುತಿಟ್ಟು ಮಹಿಳಾ ಯಕ್ಷಗಾನ ಮೇಳದ ಸಂಚಾಲಕಿ), ಜಾನಕಿ ಕೊಡ್ಯಡ್ಕ (ನಾಟಿ ವೈದ್ಯೆ), ತಬಸ್ಸುಮ್ (ಸಾಮಾಜಿಕ-ಅನಾಥ ಎಚ್.ಐ.ವಿ ಪೀಡಿತ ಮಕ್ಕಳ ಆರೈಕೆ), ಬಿ.ಎಂ.ರೋಹಿಣಿ(ಕನ್ನಡ ಮತ್ತು ತುಳು ಸಾಹಿತ್ಯ ಕ್ಷೇತ್ರ), ರೋಹಿಣಿ ಜಗರಾಮ್ (ತುಳು ರಂಗಭೂಮಿ ಮತ್ತು ಚಲನಚಿತ್ರ ರಂಗ) ಇವರ ಅಪ್ರತಿಮ ಸಾಧನೆ ಗುರುತಿಸಿ ಅಸಾಮಾನ್ಯ ಸ್ತ್ರೀ ಪುರಸ್ಕಾರ ಪ್ರದಾನ ನೆರವೇರಲಿದೆ.

ಧಾರ್ಮಿಕ ಅನುಷ್ಠಾನಗಳು

ನವರಾತ್ರಿ ಪ್ರಯುಕ್ತ ಪ್ರತಿದಿನವೂ ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಧಾರ್ಮಿಕ ಅನುಷ್ಠಾನ ಭಜನಾ ಕಾರ್ಯಕ್ರಮಗಳು ನೆರವೇರಲಿದೆ. ಸೆ.22ರಂದು ಮಹಾನವಮಿ, 23ರಂದು ದುರ್ಗಾ ಹೋಮ, 24ಕ್ಕೆ ಪಂಚದುರ್ಗಾ ಹೋಮ, 25ರಂದು ಆರ್ಯ ದುರ್ಗಾ ಹೋಮ, 26ರಂದು ಅಂಬಿಕಾದುರ್ಗಾ ಹೋಮ, ಸೆ.27 ಭಗವತಿ ದುರ್ಗಾ ಹೋಮ, 28ರಂದು ಸಾಮೂಹಿಕ ಚಂಡಿಕಾ ಹೋಮ, 29 ಮಹಿಷಮರ್ದಿನಿ ದುರ್ಗಾ ಹೋಮ. 30ರಂದು ಚಂಡಿಕಾ ಹೋಮ, ಹಗಲೋತ್ಸವ, ಅ1ರಂದು ಸರಸ್ವತಿ ಹೋಮ, 11ಕ್ಕೆ ಶತ ಸೀಯಾಳಭಿಷೇಕ. ಶಿವಪೂಜೆ (ಮಹಾನವಮಿ). ಅ2ರಂದು ವಾಗೀಶ್ವರಿ ದುರ್ಗಾ. ಶಿವಪೂಜೆ. 3ರಂದು ಪ್ರಾತಃಕಾಲ ಗಂಟೆ 4ರಿಂದ ಪೂಜೆ ಬಲಿ. ಮಂಟಪ ಬಲಿ, ಪ್ರಾತಃಕಾಲ ಮಂಟಪ ಪೂಜೆ ಬಳಿಕ ಶ್ರೀ ಶಾರದಾ ವಿಸರ್ಜನೆ, ಅವಕೃತಸ್ನಾನ, ರಾತ್ರಿ 8ರಿಂದ ಗುರುಪೂಜೆ ನೆರವೇರಲಿದೆ.

ಅಕ್ಟೋಬರ್ 2ರಂದು ಶ್ರೀ ಬಿ.ಜನಾರ್ದನ ಪೂಜಾರಿಯವರ ನೇತೃತ್ವವದಲ್ಲಿ ಸಂಜೆ 4ರಿಂದ ನವದುರ್ಗೆಯರು, ಗಣಪತಿ ಮತ್ತು ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ಕ್ಷೇತ್ರದಿಂದ ಹೊರಟು ಕಂಬ್ಬರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಲಾಲ್‌ಬಾಗ್, ಬಲ್ಲಾಳ್‌ಭಾಗ್. ಪಿವಿಎಸ್ ಸರ್ಕಲ್, ನವಭಾರತ ಸರ್ಕಲ್. ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ. ವಿ.ವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ. ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನ ಮುಂಭಾಗದಿಂದ ಕಾರ್‌ಸ್ಟ್ರೀಟ್, ಚಿತ್ರಾ ಟಾಕೀಸ್ ಅಳಕೆಯಾಗಿ ಶ್ರೀಕ್ಷೇತ್ರಕ್ಕೆ ಬರಲಿದೆ ಎಂದರು.

ಈ ಬಾರಿ 100% ಡಿಜೆ ಯನ್ನು ಬ್ಯಾನ್ ಮಾಡಲಾಗಿದೆ ಇದರಿಂದ ಆಯೋಜಕರು ಡಿ.ಜೆ ಯಾರು ಕೂಡ ಏನು ವ್ಯವಸ್ಥೆ ಮಾಡಿದ್ದಾರೋ ಅವರಿಗೆ ಅವಕಾಶ ಇಲ್ಲವೆಂದು ಸೂಚನೆ ನೀಡಿದ್ದಾರೆ,ಅದರಂತೆಯೆ ಪಾರ್ಕಿಂಗ್ ವ್ಯವಸ್ಥೆ ಕೂಡ ಹಲವೆಡೆ ಮಾಡಿದ್ದು 1000 ಕ್ಕೂ ಅಧಿಕ ಕಾರ್ಯಕರ್ತರನ್ನು ಅಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉರ್ಮಿಳ ರಮೇಶ್,ಹರಿಕೃಷ್ಣ ಬಂಟ್ವಾಳ, ಜಗದೀಶ್ ಸುವರ್ಣ,, ಕೃತಿ ಅಮೀನ್,ದೇವೆಂದ್ರ ಪೂಜಾರಿ,ಬಿ.ಜೆ ಸುವರ್ಣ, ಪಿ.ಕೆ ಗೌತಮಿ,ಶೈಲೇಂದ್ರ ಸುವರ್ಣ, ಹರೀಶ್ ಕುಮಾರ್,ಲತೇಶ್ ಕುಮಾರ್,ಚಂದನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular