ಬೆಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳದ ಕ್ಷೇತ್ರ ವಿರುದ್ಧ ಅವಹೇಳನ ಮತ್ತು ಅಪಪ್ರಚಾರ ಮಾಡುವವರ ವಿರುದ್ಧ ನಿರ್ಬಂಧಕಾಜ್ಞೆ ಹೊರಡಿಸಿದೆ. ಪ್ರಕರಣದ ಬಗ್ಗೆ ತಮ್ಮ ಕುಟುಂಬದವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ಮತ್ತು ಅವಹೇಳನಕಾರಿ ಹೇಳಿಕೆ ನೀಡದಂತೆ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಯೂಟ್ಯೂಬರ್ ಎಂ.ಡಿ. ಸಮೀರ್ ಮತ್ತು ಮಾಧ್ಯಮದವರನ್ನು ನಿರ್ದೇಶಿಸಿ ನಿರ್ಬಂಧಕಾಜ್ಞೆ ಹೊರಡಿಸಬೇಕೆಂದು ಕೋರಿ ಡಿ. ಹರ್ಷೇಂದ್ರ ಕುಮಾರ್ ಅಸಲು ದಾವೆ ದಾಖಲಿಸಿದ್ದಾರೆ. ಈ ದಾವೆ ವಿಚಾರಣೆ ನಡೆಸಿದ 11ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧಕಾಜ್ಞೆ ವಿಧಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ಕಳೆದ ಹಲವು ದಿನಗಳಿಂದ ದೇಶದ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಿದ ಹಿನ್ನೆಲೆ ಧರ್ಮಸ್ಥಳದ ದೇವಾಲಯ ಸುತ್ತಮುತ್ತ ಅಪರಿಚಿತ ಮೃತದೇಹನಗಳನ್ನು ಹೂತು ಹಾಕಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಮತ್ತು ಅವರ ಸಹೋದರ ಕುಟುಂಬದವರ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡದಂತೆ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧಕಾಜ್ಞೆ ಹೊರಡಿಸಿದೆ.


