ಮಂಗಳೂರು ; ಡಿವೈಡರ್ಗೆ ಏರಿ ವಿದ್ಯುತ್ ಕಂಬಕ್ಕೆ ಬಡಿದ ಕಾರೊಂದು ನಜ್ಜು ಗುಜ್ಜಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡು ವಿದ್ಯಾರ್ಥಿನಿಯರಿಬ್ಬರು ಸಣ್ಣ ಪುಟ್ಟ ಗಾಯಗೊಂಡ ಘಟನೆ ರಾ.ಹೆ. 66 ರ ಕೊಲ್ಯ-ಅಡ್ಕ ಮಧ್ಯೆ ನಿನ್ನೆ ರಾತ್ರಿ ನಡೆದಿದೆ.
ಕಾಸರಗೋಡು ಜಿಲ್ಲೆ ಉದ್ಯಾವರದ ಹತ್ತನೇ ಮೈಲು ನಿವಾಸಿ ಅಬ್ದುಲ್ ರಿಫಾಯಿ(24) ಮೃತಪಟ್ಟವರು.ರಿಫಾಯಿಯ ಚಿಕ್ಕಪ್ಪನ ಮಗ ಉಪ್ಪಳ,ಹಿದಾಯತ್ ನಗರ ನಿವಾಸಿ ಬಾಷರ್ ಅಹಮ್ಮದ್(22)ಚಿಂತಾ ಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ.
ನಾಲ್ವರಿದ್ದ ಕಾರು ಮಂಗಳೂರಿಂದ ಕಾಸರಗೋಡು ಕಡೆ ತೆರಳುತ್ತಿದ್ದ ವೇಳೆ ಕೊಲ್ಯ- ಅಡ್ಕ ಬಳಿ ರಸ್ತೆ ವಿಭಜಕವನ್ನು ಏರಿ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಸಂದರ್ಭ ಚಾಲಕ ರಿಫಾಯಿ ಕಾರೊಳಗಡೆ ಸಿಲುಕಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮೃತ ಅಬ್ದುಲ್ ರಿಫಾಯಿ ಅವಿವಾಹಿತರಾಗಿದ್ದು ಗಲ್ಫಲ್ಲಿ ಉದ್ಯೋಗಿಯಾಗಿದ್ದು ಶನಿವಾರದಂದು ಮನೆಗೆ ಮರಳಿದ್ದರಂತೆ.ಬಾಷರ್ ಅಹಮ್ಮದ್ ,ಫಾತಿಮಾ ಮತ್ತು ರೇವತಿ ಮೂವರು ನಗರದ ಕಾಲೇಜೊಂದರಲ್ಲಿ ಬಿಸಿಎ ವಿದ್ಯಾರ್ಥಿಗಳಾಗಿದ್ದಾರಂತೆ.
ಗಂಭೀರ ಗಾಯಗೊಂಡ ಬಾಷರ್ ಅಹಮ್ಮದ್ಗೆ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ರೇವತಿ ಮತ್ತು ಫಾತಿಮ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯರಾದ ಪ್ರಶಾಂತ್ ಗಟ್ಟಿ ಮತ್ತು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.