ಮಂಗಳೂರು ; ಮೇಡಂ, ಮುಡಾದ ಆಯುಕ್ತರಾಗಿದ್ದ ಮನ್ಸೂರ್ ಅಲಿ ಅವರು ಲೋಕಾಯುಕ್ತ ಬಲೆಗೆ ಬಿದ್ದ ಬಳಿಕ ಬಂದ ತಮ್ಮ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಬ್ರಷ್ಟಾಚಾರ ಮುಕ್ತ ಮುಡಾ ಕಚೇರಿ ಮಾಡುವಲ್ಲಿ ನೀವು ಇಟ್ಟ ಆರಂಭಿಕ ಹೆಜ್ಜೆಗಳು ಸಾಕಷ್ಟು ನಂಬಿಕೆ ಹುಟ್ಟಿಸಿತ್ತು. ಈಗಲೂ ನಿಮ್ಮಿಂದ ಅದು ಸಾಧ್ಯವಾಗಿದ್ದರೂ ತಾವೂ ಯಾರದೋ ಒತ್ತಡಕ್ಕೆ ಸಿಲುಕಿದ್ದೀರಿ ಎಂದು ಅನಿಸಿದೆ. ಇದೇ ಕಾರಣದಿಂದ ಬ್ರಷ್ಟರು ನಿಮ್ಮ ಕಚೇರಿಯಲ್ಲಿ ಇನ್ನಿಲ್ಲದ ಆಟ ಆಡುತ್ತಿದ್ದಾರೆ ಎನ್ನುವುದು ಸುಳ್ಳಲ್ಲ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಿಮ್ಮದೇ ಕಚೇರಿಯ ಸಿಸಿ ಟಿವಿ ದೃಶ್ಯದಲ್ಲಿ ಕಂಡ ಬಂದ ದೃಶ್ಯದ ಕಥೆ ಏನಾಯ್ತು ? ಈ ಬಗ್ಗೆ ತಾವು ಕೈಗೊಂಡ ಕ್ರಮ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ ಎಂಬ ಕಾರಣಕ್ಕೆ ಈ ಪ್ರಶ್ನೆಗಳನ್ನು ಕೇಳಬೇಕಾಗಿ ಬಂದಿದೆ. ಮನ್ಸೂರು ಅವರಿದ್ದ ಅವಧಿಯಲ್ಲೂ ಇದೇ ಇಬ್ರಾಹಿಂ ಆಡಿದ ಅಟಾಟೋಪಗಳು ಒಂದೆರಡಲ್ಲ. ಯಾವುದೇ ಫೈಲ್‌ಗಳು ಈತನನ್ನು ದಾಟಿ ಟಿಪಿಒ , ಟಿಪಿಎಂ ಹಾಗೂ ಆಯುಕ್ತರಾಗಿದ್ದ ಮನ್ಸೂರ್ ಅವರ ಟೇಬಲ್ ಬಳಿ ಸುಳಿದಾಡುತ್ತಿರಲಿಲ್ಲ. ಕೇವಲ ಇಬ್ರಾಹಿಂ ಮಾತ್ರವಲ್ಲದೆ ಇನ್ನು ಅನೇಕ ಬ್ರೋಕರ್‌ಗಳ ಹಾವಳಿಯಿಂದ ಮುಡಾ ಕಚೇರಿ ಹಣ ಬಾಚುವ ಹೆಗ್ಗಣಗಳಿಂದಲೇ ತುಂಬಿತ್ತು.
ತಾವು ಅಧಿಕಾರ ವಹಿಸಿಕೊಂಡ ಬಳಿಕ ಆರಂಭದಲ್ಲಿ ಒಂದಷ್ಟು ಬದಲಾವಣೆಯ ಜೊತೆಗೆ ಸುಧಾರಣೆ ಕಂಡಿತ್ತಾದ್ರೂ ಮುಡಾ ಅಧ್ಯಕ್ಷರ ನೇಮಕದ ಬಳಿಕ ಎಲ್ಲವೂ ಹಿಂದಿನಂತಾಗಿದೆ. ನಿಮ್ಮ ಕಣ್ಣೆದುರೇ ನಡೆಯುತ್ತಿರುವ ಬ್ರಷ್ಟಾಚಾರವನ್ನು ನಿಗ್ರಹಿಸಲು ನೀವು ಹೆಣಗಾಡುತ್ತಿದ್ದೀರಿ ಎನ್ನುವುದು ಎದ್ದು ಕಾಣುತ್ತಿದೆ. ಮುಡಾ ಎಂಬ ಪ್ರಾಧಿಕಾರಕ್ಕೆ ಅಧ್ಯಕ್ಷರು ಬರುತ್ತಾರೆ ಹೋಗುತ್ತಾರೆಯಾದ್ರೂ ಸರ್ಕಾರದ ಅಧಿಕಾರಿಯಾಗಿ ನೀವೇ ಅದಕ್ಕೆ ಸುಪೀರಿಯರ್. ಹೀಗಿರುವಾಗ ನಿಮ್ಮದೇ ಕಚೇರಿಯಲ್ಲಿ ನಿಮ್ಮದೇ ಅನುಮತಿ ಇಲ್ಲದೆ ಸಿಸಿ ಟಿವಿ ದೃಶ್ಯವನ್ನು ತೆಗೆದು ಹೊರ ಜಗತ್ತಿಗೆ ತೋರಿಸಿದ್ದೇ ಅಚ್ಚರಿಯ ಸಂಗತಿ. ವಿಶೇಷವಾಗಿ ಇಬ್ರಾಹಿಂ ಎಂಬ ಬ್ರೋಕರ್ ಅಧಿಕಾರಿ ಇಲ್ಲದ ವೇಳೆ ಚೇಂಬರ್ ಒಳ ಹೊಕ್ಕಿದ್ದು, ಫೈಲ್ ತಿದ್ದಿರುವುದು ಕ್ರಿಮಿನಲ್ ಅಪರಾಧವಾಗುತ್ತದೆ. ಇಷ್ಟೊಂದು ಬೆಳವಣಿಗೆಗಳು ಆಗಿದ್ದರೂ ಈ ಬಗ್ಗೆ ತಾವು ತೆಗೆದುಕೊಂಡ ಕನಿಷ್ಟ ಕ್ರಮ ಏನು ಎಂಬುದು ಜನತೆಗೆ ತಿಳಿಯಬೇಕಾಗಿದೆ.
ಇಬ್ರಾಹಿಂ ಎಂಬ ಬ್ರೋಕರ್ ಅಧಿಕಾರಿಯ ಚೇಂಬರ್ ಒಳಗೆ ಹೋಗಿ ಅವರಿಲ್ಲದ ಸಮಯದಲ್ಲಿ ಪರಿಶೀಲನೆ ನಡೆಸಿರುವ ಫೈಲ್ ಒಬ್ಬ ಪ್ರಭಾವಿ ಬಿಜೆಪಿ ನಾಯಕನಿಗೆ ಸೇರಿದ್ದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದೆಲ್ಲಾ ಕಾರಣದಿಂದ ಮುಡಾದಲ್ಲಿ ಯಾರ ಕಾನೂನು ಜಾರಿಯಲ್ಲಿದೆ ಎಂಬುದಕ್ಕೆ ತಾವೇ ಉತ್ತರಿಸಬೇಕಾಗಿದೆ. ಮುಡಾ ಕಚೇರಿಗೆ ಸುಪೀರಿಯರ್ ಆಗಿ ನಿಮ್ಮನ್ನು ನೇಮಕ ಮಾಡಿರುವ ಸರ್ಕಾರದ ಕಾನೂನೇ ? ಅಥವಾ ಸರ್ಕಾರದ ವತಿಯಿಂದ ನೇಮಕವಾಗಿರುವ ಕಾಂಗ್ರೆಸ್ ಅಧ್ಯಕ್ಷನ ಕಾನೂನೇ ? ನಿಮಗೆ ನಿಮ್ಮದೇ ಕಚೇರಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬ್ರಷ್ಟರನ್ನು ನಿಗ್ರಹಿಸಲು ಯಾರ ಭಯ ? ನಿಮ್ಮ ಕಚೇರಿಯನ್ನು ಬ್ರಷ್ಟಾಚಾರ ಮುಕ್ತವಾಗಿ ಮಾಡಲು ಹಾಗೂ ಇಬ್ರಾಹಿಂ ನಂತಹ ಬ್ರೋಕರ್‌ಗಳನ್ನು ಕಟ್ಟಡದಿಂದಲೇ ಹೊರಗಿರಿಸಲು ತಾವು ಏನು ಕ್ರಮ ಕೈಗೊಂಡಿದ್ದೀರಿ ಹಾಗೂ ಕಚೇರಿಯೊಳಗೆ ಅಕ್ರಮ ಪ್ರವೇಶ ಮಾಡಿ ಫೈಲ್ ತಿದ್ದುಪಡಿ ಮಾಡಿದ ಆರೋಪಿಯ ವಿರುದ್ದ ಯಾರಿಗೆ ದೂರು ನೀಡಿದ್ದೀರಿ ಎಂಬ ಮಾಹಿತಿ ಜನರಿಗೆ ನೀಡಬೇಕಾಗಿದೆ.
.